ಬೆಂಗಳೂರು: ಈ ಹಿಂದಿನಂತೆ ಎರಡು ಪಾಳಿಯಲ್ಲಿ ಕಾರ್ಯನಿರ್ವಹಣೆಗೆ ಅವಕಾಶ ಮಾಡಿಕೊಡಬೇಕೆಂದು ಒತ್ತಾಯಿಸಿ 108 ಆರೋಗ್ಯ ಕವಚ ಯೋಜನೆಯ ಆಂಬುಲೆನ್ಸ್ ನೌಕರರು ಆಗಸ್ಟ್ 1ರಿಂದ ಮುಷ್ಕರ ಕೈಗೊಂಡಿದ್ದಾರೆ.
ಕೂಡಲೇ ಬೇಡಿಕೆ ಈಡೇರಿಸಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಆಗಸ್ಟ್ 1ರಿಂದ ಮುಷ್ಕರ ಕೈಗೊಳ್ಳುವುದಾಗಿ ನೌಕರರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಸುವರ್ಣ ಕರ್ನಾಟಕ ಆರೋಗ್ಯ ಕವಚ 108 ನೌಕರರ ಸಂಘದ ಉಪಾಧ್ಯಕ್ಷ ಪರಮಶಿವ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ಯೋಜನೆಯಡಿ 3500 ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಸರ್ಕಾರದ ಆದೇಶದಂತೆ ಈ ಹಿಂದೆ ಇದ್ದ 12 ಗಂಟೆಗಳ ಎರಡು ಪಾಳಿಯನ್ನು ರದ್ದುಗೊಳಿಸಿ ಜನವರಿ 1ರಿಂದ 8 ಗಂಟೆಗಳ ಅವಧಿಯ ಮೂರು ಪಾಳಿ ನಿಗದಿ ಮಾಡಿ ವೇತನ ಕಡಿತಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
3 ಪಾಳಿ ಜಾರಿ ಮಾಡಿರುವುದರಿಂದ ಬೆಳಗ್ಗೆ 6 ಗಂಟೆ ಮತ್ತು ರಾತ್ರಿ 10 ಗಂಟೆಯ ಪಾಳಿಗೆ ಹಾಜರಾಗುವ ನೌಕರರು ಸಾರಿಗೆ ವ್ಯವಸ್ಥೆ ಇಲ್ಲದೆ ತೊಂದರೆ ಅನುಭವಿಸುವಂತಾಗಿದೆ. ಅವಧಿ ಕಡಿಮೆ ಎಂದು ಹೇಳಿ ವೇತನ ಕಡಿತ ಮಾಡಿದ್ದು, ಇದರಿಂದ ಆರ್ಥಿಕ ಸಮಸ್ಯೆ ಎದುರಾಗಿದೆ ಎಂದು ತಿಳಿಸಿದ್ದಾರೆ.
ಗ್ರಾಮೀಣ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಕೂಡ ಮೂರು ಪಾಳಿಗಳಿಂದ ತೊಂದರೆ ಎದುರಿಸುತ್ತಿದ್ದಾರೆ. ಸಾರಿಗೆ ವ್ಯವಸ್ಥೆ, ಮೂಲಸೌಕರ್ಯ ಕಲ್ಪಿಸುವ ಜೊತೆಗೆ ವೇತನ ಹೆಚ್ಚಿಸಬೇಕು. ಇಲ್ಲದಿದ್ದಲ್ಲಿ ಮೊದಲಿನಂತೆ ಎರಡು ಪಾಳಿಯಲ್ಲಿ ಸಮಯ ನಿಗದಿ ಮಾಡಬೇಕು. ಜುಲೈ 31ರೊಳಗೆ ಕ್ರಮ ಕೈಗೊಳ್ಳದಿದ್ದಲ್ಲಿ ಆಗಸ್ಟ್ 1ರಿಂದ ಕೆಲಸಕ್ಕೆ ಗೈರಾಗುವ ಮೂಲಕ ಮುಷ್ಕರ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.