ಹಳೆ ಪಿಂಚಣಿ ನಿರೀಕ್ಷೆಯಲ್ಲಿದ್ದ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್: ಬಹುದಿನದ ಬೇಡಿಕೆಯಂತೆ OPS ಜಾರಿ: ಸಚಿವ ಮಧು ಬಂಗಾರಪ್ಪ ಮಾಹಿತಿ

ಶಿವಮೊಗ್ಗ: ರಾಜ್ಯ ಸರ್ಕಾರಿ ನೌಕರರ ಬಹುದಿನದ ಬೇಡಿಕೆಯಾದ ಹಳೆ ಪಿಂಚಣಿ ಯೋಜನೆ(ಒಪಿಎಸ್)ಯನ್ನು ಆದಷ್ಟು ಬೇಗ ಅನುಷ್ಟಾನಗೊಳಿಸುವ ನಿರ್ಧಾರವನ್ನು ಪ್ರಕಟಿಸಲು ಸರ್ಕಾರ ಬದ್ದವಾಗಿದೆ  ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಎಸ್.ಮಧು‌ ಬಂಗಾರಪ್ಪ ತಿಳಿಸಿದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬೆಂಗಳೂರು ಹಾಗೂ ಜಿಲ್ಲಾ ಶಾಖೆ ಶಿವಮೊಗ್ಗ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಇವರುಗಳ ಸಂಯುಕ್ತಾಶ್ರಯದಲ್ಲಿ ಭಾನುವಾರ ನಗರದ ನೆಹರು ಕ್ರೀಡಾಂಗಣ ಆಯೋಜಿಸಿದ್ದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿದ ಅವರು ಮಾತನಾಡಿದರು.

ಸರ್ಕಾರದ ಕಾನೂನುಗಳು, ಯೋಜನೆಗಳು, ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸುವ ಸರ್ಕಾರಿ ನೌಕಕರಾದ ನೀವು ಆರೋಗ್ಯದಿಂದ, ಚೈತನ್ಯದಿಂದ ಇರಬೇಕು. ಇದಕ್ಕೆ ಇಂತಹ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದರು.

ಮಾಜಿ‌ ಮುಖ್ಯಮಂತ್ರಿ ಬಂಗಾರಪ್ಪನವರು ಜಾರಿಗೊಳಿಸಿದ ಗ್ರಾಮೀಣ ಕೃಪಾಂಕದಿಂದ ಹೆಚ್ಚು ಜನ ಸರ್ಕಾರಿ ನೌಕರಿಯನ್ನು  ಪಡೆಯುವಂತಾಯಿತು. ಹಾಗೂ ಅವರು ಸಂಘಕ್ಕೆ ಬುನಾದಿ ಹಾಕಿಕೊಟ್ಟರು ಎಂದು ಸ್ಮರಿಸಿದ ಅವರು 2017ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇದೇ ಸ್ಥಳಕ್ಕೆ ಬಂದಿದ್ದು ಕ್ರೀಡಾಕೂಟವನ್ನು ಉದ್ಘಾಟಿಸಿದ್ದರು. ಹವಾಮಾನ ವೈಪರೀತ್ಯಗಳಿಂದ ಇಂದು ಬರಲು ಸಾಧ್ಯವಾಗಲಿಲ್ಲ. ಮುಂದಿನ ದಿನಗಳಲ್ಲಿ ಬಂದು ನೌಕರರನ್ನು ಉದ್ದೇಶಿಸಿ ಮಾತನಾಡುವರು.

ಗ್ಯಾರಂಟಿ ಯೋಜನೆಗಳ ಪ್ರಣಾಳಿಕೆಯಲ್ಲಿ ತಿಳಿಸಿದಂತೆ ರಾಜ್ಯ ಸರ್ಕಾರಿ ನೌಕರರ ಬೇಡಿಕೆಯಾದಂತಹ ಎನ್.ಪಿ.ಎಸ್. ಬದಲು ಒಪಿಸ್ ಅನ್ನು ಶೀಘ್ರದಲ್ಲೇ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಜಾರಿಗೊಳಿಸುವ ಬಗ್ಗೆ ನಿರ್ಧಾರ ಪ್ರಕಟಿಸುವರು. 6ನೇ ವೇತನ ಮತ್ತು 7ನೇ ವೇತನ ಆಯೋಗವನ್ನು ಸಹ ಮುಖ್ಯ ಮಂತ್ರಿಗಳು ಜಾರಿಗೊಳಿಸಿರುವುದು ಹೆಮ್ಮೆಯ ವಿಷಯ ಎಂದರು.

ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಮಾಜಿ‌ ಮುಖ್ಯಮಂತ್ರಿ ಯಡಿಯೂರಪ್ಪನವರು ನೌಕರರ ಪರವಾಗಿ ಸುಮಾರು 24 ಆದೇಶ ಜಾರಿ ಮಾಡಿದ್ದರು, ನೌಕರರ ಭವನಕ್ಕೆ ಒತ್ತು ನೀಡಿದ್ದರು. ನೌಕರರು ಒತ್ತಡರಹಿತರಾಗಿ, ಉತ್ತಮ ಸೇವೆ ನೀಡಬೇಕು. ನಿಮ್ಮಲ್ಲೂ ಅನೇಕ ಪ್ರತಿಭೆ ಇದ್ದು ಅದು ಹೊರಹೊಮ್ಮಲು ಇದೊಂದು ಉತ್ತಮ ವೇದಿಕೆಯಾಗಿದೆ.  ಇ- ಆಡಳಿತ ನಂ. 1ಸ್ಥಾನ ಪಡೆಯಲು ನೀವು ಕಾರಣ ಎಂದು ಶ್ಲಾಘಿಸಿದರು.

ಕರ್ನಾಟಕ ರಾಜ್ಯ ಸರ್ಕಾರಿ‌ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಪ್ರಾಸ್ತಾವಿಕವಾಗಿ ಮಾತನಾಡಿ,  ಜೂನ್ ನಿಂದ ನೌಕರರಿಗೆ ಉಚಿತ ಚಿಕಿತ್ಸೆ ನೀಡುವ ಯೋಜನೆ ಜಾರಿಗೆ ಬರಲಿದ್ದು, ಅದಕ್ಕೂ ಸಹ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ.  ಕರ್ತವ್ಯನಿರತ ನೌಕರನ ಸಾವು ಸಂಭವಿಸಿದರೆ  ಕುಟುಂಬಕ್ಕೆ 1 ಕೋಟಿ ರೂ. ನೀಡುವ ಯೋಜನೆಯನ್ನು ಸಂಘದಿಂದ ಜಾರಿ ಮಾಡಲಾಗುತ್ತಿದೆ. ಸರ್ಕಾರಿ ನೌಕರರಿಗೆ ಎನ್.ಪಿ.ಎಸ್. ಬದಲು ಒಪಿಎಸ್ ಜಾರಿ ಮಾಡಿದಲ್ಲಿ ನೌಕರರು ಸರ್ಕಾರಕ್ಕೆ ಋಣಿಯಾಗಿರುತ್ತಾರೆ. ನಾವು ಅಭಿವೃದ್ದಿಯಲ್ಲಿ ಮುಂದಿದ್ದೇವೆ. ಆದರೆ ರಾಜ್ಯ ಸರ್ಕಾರಿ ನೌಕರರಿಗೆ ಕೇಂದ್ರ ಮಾದರಿ ವೇತನ ಇನ್ನೂ ಜಾರಿ ಆಗಿಲ್ಲ. 2026-27 ನೇ ಸಾಲಿನಲ್ಲಿ ಕೇಂದ್ರ ಮಾದರಿ‌ ವೇತನ ಆಗಬೇಕು ಎಂದು ಕೋರಿದರು.

ಶಾಸಕ ಎಸ್.ಎನ್.ಚನ್ನಬಸಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಾಸಕರಾದ ಬೇಳೂರು ಗೋಪಾಲಕೃಷ್ಣ, ಆರಗ ಜ್ಞಾನೇಂದ್ರ, ಬಿ.ಕೆ.ಸಂಗಮೇಶ್, ವಿಧಾನ ಪರಿಷತ್ ಶಾಸಕರಾದ ಡಿ.ಎಸ್ ಅರುಣ್, ಭಾರತಿ ಶೆಟ್ಟಿ, ಬಲ್ಕೀಶ್ ಬಾನು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತರಾದ ಚೇತನ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ರಾಷ್ಟ್ರ ಮಟ್ಟದಲ್ಲಿ ಶ್ರೇಷ್ಠ ಸಾಧನೆ ಮಾಡಿದ ರಾಜ್ಯ ಸರ್ಕಾರಿ ನೌಕರರನ್ನು ಸನ್ಮಾನಿಸಿ, ಅಭಿನಂದಿಸಲಾಯಿತು.

ರಾಜ್ಯ ಭೋವಿ‌ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ರವಿಕುಮಾರ್, ಸೂಡಾ ಅಧ್ಯಕ್ಷ ಸುಂದರೇಶ್, ಕಾಡಾ ಅಧ್ಯಕ್ಷ ಡಾ.ಅಂಶುಮಂತ್, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಚಂದ್ರಭೂಪಾಲ್, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿ.ಪಂ.ಸಿಇಓ ಹೇಮಂತ್, ಎಸ್ಪಿ ಮಿಥುನ್ ಕುಮಾರ್ ಇತರರು ಇದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read