ವಿಧಾನ ಪರಿಷತ್ ಸದಸ್ಯರಾಗಿ ಜಗದೀಶ್ ಶೆಟ್ಟರ್ ಸೇರಿದಂತೆ ಮೂವರ ಅವಿರೋಧ ಆಯ್ಕೆ

ವಿಧಾನ ಪರಿಷತ್ ಸದಸ್ಯರಾಗಿ ಕಾಂಗ್ರೆಸ್ ನಿಂದ ಕಣಕ್ಕಿಳಿದಿದ್ದ ಜಗದೀಶ್ ಶೆಟ್ಟರ್ ಸೇರಿದಂತೆ ಮೂವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಜಗದೀಶ್ ಶೆಟ್ಟರ್, ಬೋಸರಾಜು ಹಾಗೂ ತಿಪ್ಪಣ್ಣ ಕಮಕನೂರು ಅವರ ಆಯ್ಕೆಯನ್ನು ಚುನಾವಣಾಧಿಕಾರಿ ವಿಶಾಲಾಕ್ಷಿ ಶುಕ್ರವಾರದಂದು ಅಧಿಕೃತವಾಗಿ ಘೋಷಿಸಿದ್ದಾರೆ.

ಬಾಬುರಾವ್ ಚಿಂಚನಸೂರ, ಲಕ್ಷ್ಮಣ ಸವದಿ ಹಾಗೂ ಆರ್. ಶಂಕರ್ ಅವರ ರಾಜೀನಾಮೆಯಿಂದ ತೆರವಾದ ಈ ಮೂರು ಸ್ಥಾನಗಳಿಗೆ ಕೇಂದ್ರ ಚುನಾವಣಾ ಆಯೋಗ ಉಪ ಚುನಾವಣೆ ಘೋಷಿಸಿದ್ದು, ಪ್ರತಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರಲಿಲ್ಲ.

ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡಿದ್ದ ಜಗದೀಶ್ ಶೆಟ್ಟರ್, ಈ ಚುನಾವಣೆಯಲ್ಲಿ ಪರಾಭವಗೊಂಡರೂ ಸಹ ಅವರಿಗೆ ಸೂಕ್ತ ಸ್ಥಾನಮಾನ ನೀಡುವ ಭರವಸೆಯನ್ನು ಕಾಂಗ್ರೆಸ್ ನೀಡಿದ್ದು, ಅದರಂತೆ ಈಗ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಲಾಗಿದೆ.

ಇನ್ನುಳಿದಂತೆ ಯಾವುದೇ ಸದನದ ಸದಸ್ಯರಲ್ಲದ ಬೋಸರಾಜು ಅವರನ್ನು ಸಚಿವರನ್ನಾಗಿ ಮಾಡಿದ್ದು, ಹೀಗಾಗಿ ಅವರು ಆರು ತಿಂಗಳ ಒಳಗೆ ವಿಧಾನಸಭೆ ಅಥವಾ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಬೇಕಿತ್ತು. ಈ ಹಿನ್ನಲೆಯಲ್ಲಿ ಒಂದು ಸ್ಥಾನ ಅವರಿಗೆ ಕಲ್ಪಿಸಲಾಗಿದ್ದು, ಮತ್ತೊಂದು ಸ್ಥಾನವನ್ನು ಮಲ್ಲಿಕಾರ್ಜುನ ಖರ್ಗೆಯವರ ಆಪ್ತ ತಿಪ್ಪಣ್ಣ ಕಮಕನೂರು ಅವರಿಗೆ ನೀಡಲಾಗಿತ್ತು. ಈ ಮೂವರೂ ಕೂಡ ಈಗ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read