ಬೆಂಗಳೂರು: ಮ್ಯಾಟ್ರಿಮೋನಿಯಲ್ ತಾಣದ ಮೂಲಕ ಯುವತಿಯೊಬ್ಬಳು ಸ್ನೇಹದ ಬಲೆಗೆ ಬೆಳಿಸಿಕೊಂಡು ಮದುವೆಯಾಗುವುದಾಗಿ ನಂಬಿಸಿ ಉದ್ಯಮಿಯಿಂದ 12.61 ಲಕ್ಷ ರೂ. ಪಡೆದು ವಂಚಿಸಿದ ಘಟನೆ ನಡೆದಿದೆ.
ಜೆ.ಪಿ. ನಗರದ ರಾಘವೇಂದ್ರ ಲೇಔಟ್ ನಿವಾಸಿ ಜಿ. ರಘು ವಂಚನೆಗೆ ಒಳಗಾಗಿದ್ದು, ದಕ್ಷಿಣ ವಿಭಾಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಜನವರಿಯಲ್ಲಿ ಮ್ಯಾಟ್ರಿಮೋನಿಯಲ್ ವೆಬ್ಸೈಟ್ ನಲ್ಲಿ ರಘು ಅವರಿಗೆ ಪ್ರಿಯಾಂಕಾ ಎಂಬಾಕೆ ಪರಿಚಯವಾಗಿದ್ದಾಳೆ. ಮಾತುಕತೆ ನಡೆದು ಮದುವೆ ಹಂತಕ್ಕೆ ಹೋಗಿದೆ.
ಕೆಲವು ದಿನಗಳ ನಂತರ ಪ್ರಿಯಾಂಕಾ ಸಂಕಷ್ಟಕ್ಕೆ ಸಿಲುಕಿದ್ದು, ತಕ್ಷಣಕ್ಕೆ ಮದುವೆಯಾಗಲು ಸಾಧ್ಯವಿಲ್ಲ ಎಂದು ಅಳಲು ತೋಡಿಕೊಂಡಿದ್ದಾಳೆ. ಆನ್ಲೈನ್ ಗೆಳತಿಯ ನೋವಿಗೆ ಮಿಡಿದು ರಘು ಸುಮ್ಮನಾಗಿದ್ದಾರೆ. ನಂತರದಲ್ಲಿ ತಾನು ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿ ಒಳ್ಳೆಯ ಲಾಭಗಳಿಸಿದ್ದೇನೆ. ಆದರೆ ನನ್ನ ಬಳಿ ತಕ್ಷಣಕ್ಕೆ ಹಣ ಇಲ್ಲ. ನೀವು ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಪಡೆದು ಆನಂತರ ಮದುವೆ ಮಾಡಿಕೊಳ್ಳೋಣ ಎಂದು ಹೇಳಿದ್ದಾಳೆ.
ಇದಕ್ಕೆ ರಘು ನನಗೆ ಷೇರು ಮಾರುಕಟ್ಟೆಯ ಬಗ್ಗೆ ಜ್ಞಾನ ಇಲ್ಲ ಎಂದು ತಿಳಿಸಿದ್ದಾರೆ. ನಾನು ಹೇಳಿಕೊಡುತ್ತೇನೆ ಎಂದು ಆಕೆ ನಂಬಿಸಿದ್ದಾಳೆ. ಆರೋಪಿ ಸೂಚಿಸಿದ್ದ ಬ್ಯಾಂಕ್ ಖಾತೆಗಳಿಗೆ ರಘು ಹಣ ವರ್ಗಾಯಿಸಿದ್ದಾರೆ. ಆದರೆ ನಯಾ ಪೈಸೆ ಲಾಭ ಬಂದಿಲ್ಲ. ನಂತರ ಆಕೆ ಸಂಪರ್ಕ ಕಳೆದುಕೊಂಡಿದ್ದಾಳೆ. ವಂಚನೆಗೊಳಗಾದ ರಘು ದೂರು ನೀಡಿದ್ದಾರೆ.