ಮೋದಿ ಸರ್ಕಾರದ ‘ಅಮೃತ ಕಾಲ’ ಬಜೆಟ್‌ನಲ್ಲಿದೆ 2024ರ ಲೋಕಸಭಾ ಕದನಕ್ಕೆ ಬಹುದೊಡ್ಡ ರಾಜಕೀಯ ಸಂದೇಶ…..!

ನರೇಂದ್ರ ಮೋದಿ ಸರ್ಕಾರ 2024ರ ಲೋಕಸಭಾ ಸಮರಕ್ಕೆ ತಯಾರಿ ಆರಂಭಿಸಿದೆ. ಕೇಂದ್ರ ಬಜೆಟ್‌ನಲ್ಲಿ ಮೋದಿ ಸರ್ಕಾರ ಐದು ಪ್ರಮುಖ ರಾಜಕೀಯ ಸಂದೇಶಗಳನ್ನೂ ನೀಡಿದೆ. ಬಡವರಿಗಾಗಿ ವಸತಿ ಯೋಜನೆ, ಕುಡಿಯುವ ನೀರಿನ ಯೋಜನೆ ಮತ್ತು ಆಯುಷ್ಮಾನ್ ಭಾರತ್ ಆರೋಗ್ಯ ವಿಮಾ ಯೋಜನೆಗಳ ಹಂಚಿಕೆಯಲ್ಲಿ ಗಮನಾರ್ಹ ಹೆಚ್ಚಳ, ಆದಿವಾಸಿಗಳಿಗೆ 15,000 ಕೋಟಿ ರೂಪಾಯಿಗಳ ಹೊಸ ಯೋಜನೆ,  ವೈಯಕ್ತಿಕ ತೆರಿಗೆ ಪಾವತಿದಾರರಿಗೆ ಹೊಸ ತೆರಿಗೆ ಪದ್ಧತಿಯಲ್ಲಿ ಸಡಿಲಿಕೆಗಳು ಇವೆಲ್ಲವೂ 2023ರ ‘ಅಮೃತ್ ಕಾಲ’ ಬಜೆಟ್‌ನಲ್ಲಿ ನರೇಂದ್ರ ಮೋದಿ ಸರ್ಕಾರ ನೀಡಿರುವ ಐದು ಪ್ರಮುಖ ರಾಜಕೀಯ ಸಂದೇಶಗಳಾಗಿವೆ.

ದೇಶವು ಮುಂದಿನ ವರ್ಷ ಲೋಕಸಭಾ ಚುನಾವಣೆಯನ್ನು ಎದುರಿಸಲಿದೆ. ಈ ವರ್ಷ ವಿವಿಧ ಪ್ರಮುಖ ರಾಜ್ಯಗಳ ಚುನಾವಣೆಯೂ ನಡೆಯಲಿದೆ. ಕಳೆದ ಎರಡು ಸಾರ್ವತ್ರಿಕ ಚುನಾವಣೆಗಳಲ್ಲಿ ನರೇಂದ್ರ ಮೋದಿ ಅವರನ್ನು ಪ್ರಧಾನಿಯಾಗಿ ಬೆಂಬಲಿಸಿದ ಬಡವರಿಗಾಗಿ ಕಲ್ಯಾಣ ಯೋಜನೆಗಳನ್ನು ಗುರಿಯಾಗಿಟ್ಟುಕೊಂಡು ಸರ್ಕಾರ ತನ್ನ ಕೊನೆಯ ಬಜೆಟ್‌ ಅನ್ನು ಮಂಡಿಸಿದೆ. ಹೊಸ ತೆರಿಗೆ ಪದ್ಧತಿಯಲ್ಲಿನ ಸಡಿಲಿಕೆಗಳು, ಕಡಿಮೆ ಅಥವಾ ಮಧ್ಯಮ ಆದಾಯವನ್ನು ಹೊಂದಿರುವವರಿಗೆ ವಿನಾಯಿತಿ ಹೀಗೆ ಅನೇಕ ಯೋಜನೆಗಳನ್ನು ಪ್ರಕಟಿಸಿದೆ.

ವಸತಿ, ನೀರು, ಚಿಕಿತ್ಸೆ…

ಸರ್ಕಾರ 2024 ರಲ್ಲಿ ಪೂರ್ಣಗೊಳಿಸುವ ಗುರಿ ಹೊಂದಿರುವ ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ 79,950 ಕೋಟಿ ರೂಪಾಯಿಗಳನ್ನು ನಿಗದಿಪಡಿಸಿದೆ. ಇದು ಕಳೆದ ಬಜೆಟ್‌ಗಿಂತ ಶೇ.66 ರಷ್ಟು ಹೆಚ್ಚಾಗಿದೆ. 2024ರ ವೇಳೆಗೆ ಸುಮಾರು 2.94 ಕೋಟಿ ಬಡವರು ಮನೆ ಪಡೆಯುವ ಗುರಿ ಹೊಂದಿದ್ದು, ಅದರಲ್ಲಿ 2.12 ಕೋಟಿ ಮನೆಗಳನ್ನು ಪೂರ್ಣಗೊಳಿಸಿ ಬಡವರಿಗೆ ಹಸ್ತಾಂತರಿಸಲಾಗಿದೆ.ಮತ್ತೊಂದು ಮಹತ್ವದ ಸಂದೇಶ ಜಲ ಜೀವನ್ ಮಿಷನ್‌ನಲ್ಲಿದೆ. ಇದಕ್ಕಾಗಿ ಬಜೆಟ್‌ನಲ್ಲಿ 70,000 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ. ಈ ಯೋಜನೆಯು 2024 ರಲ್ಲಿ ಪೂರ್ಣಗೊಳ್ಳುವ ಗುರಿ ಹೊಂದಿದೆ. ದೇಶದ ಎಲ್ಲಾ 20 ಕೋಟಿ ಕುಟುಂಬಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವುದು ಯೋಜನೆಯ ಉದ್ದೇಶ.

ಕಳೆದ ವರ್ಷದ ಬಜೆಟ್‌ನಲ್ಲಿ ಇದಕ್ಕಾಗಿ 60,000 ಕೋಟಿ ರೂಪಾಯಿ ಮೀಸಲಿಡಲಾಗಿತ್ತು. ಇಲ್ಲಿಯವರೆಗೆ 11 ಕೋಟಿ ಮನೆಗಳಿಗೆ ಕುಡಿಯುವ ನೀರು ಒದಗಿಸಲಾಗಿದೆ. ಈ ಯೋಜನೆಯು 2024 ರಲ್ಲಿ ಬಿಜೆಪಿಗೆ ಗೇಮ್ ಚೇಂಜರ್ ಆಗಲಿದೆ ಎಂಬ ನಿರೀಕ್ಷೆಯಿದೆ. ಬಜೆಟ್‌ನಲ್ಲಿ ಮೂರನೇ ಪ್ರಮುಖ ಸಂಗತಿಯೆಂದರೆ ಆಯುಷ್ಮಾನ್ ಭಾರತ್ ಆರೋಗ್ಯ ವಿಮಾ ಯೋಜನೆ. ಕಳೆದ ಬಜೆಟ್‌ನಲ್ಲಿ 6,457 ಕೋಟಿ ರೂಪಾಯಿ ಹಣವನ್ನು ಈ ಯೋಜನೆಗೆ ನೀಡಲಾಗಿತ್ತು. ಇದನ್ನು 7,200 ಕೋಟಿ ರೂಪಾಯಿಗೆ ಹೆಚ್ಚಳ ಮಾಡಲಾಗಿದೆ.

ಈ ಯೋಜನೆಯಡಿ ಇದುವರೆಗೆ ದೇಶದ ಸುಮಾರು 4.5 ಕೋಟಿ ಬಡವರು ಉಚಿತ ಆರೋಗ್ಯ ವಿಮೆಯನ್ನು ಪಡೆದಿದ್ದಾರೆ. ಪಿಎಂ-ಕಿಸಾನ್ ಅಡಿಯಲ್ಲಿ 11.4 ಕೋಟಿ ರೈತರಿಗೆ ಇದುವರೆಗೆ 2.2 ಲಕ್ಷ ಕೋಟಿ ರೂಪಾಯಿಗಳ ನಗದು ವರ್ಗಾವಣೆಯಾಗಿದೆ. ಈ ಹಣಕಾಸು ವರ್ಷಕ್ಕೆ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ 60,000 ಕೋಟಿ ರೂಪಾಯಿಗಳನ್ನು ನಿಗದಿಪಡಿಸಲಾಗಿದೆ. ಆದಾಗ್ಯೂ ಸರ್ಕಾರ 2022-23 ರಲ್ಲಿ ಪರಿಷ್ಕೃತ ಅಂದಾಜಿನಲ್ಲಿ 84,900 ಕೋಟಿ ರೂಪಾಯಿಗಳಿಂದ MGNREGA ಮೇಲಿನ ಹಂಚಿಕೆಯನ್ನು ಈ ವರ್ಷದ ಬಜೆಟ್‌ನಲ್ಲಿ 60,000 ಕೋಟಿ ರೂಪಾಯಿಗಳಿಗೆ ಗಮನಾರ್ಹವಾಗಿ ಕಡಿಮೆ ಮಾಡಿದೆ. ಕಳೆದ ಬಜೆಟ್‌ನಲ್ಲಿ ಇದಕ್ಕಾಗಿ 73,000 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿತ್ತು.

ಬುಡಕಟ್ಟು ಜನಾಂಗಗಳ ಮೇಲೆ ಗಮನ

ಪರಿಶಿಷ್ಟ ಜಾತಿಗಳು (ಎಸ್‌ಸಿ) ಮತ್ತು ಬುಡಕಟ್ಟು ಜನಾಂಗದ ಮತದಾರರ ಕ್ಷೇತ್ರಗಳ ಮೇಲೆಯೂ ಬಜೆಟ್‌ನಲ್ಲಿ ಹೆಚ್ಚು ಗಮನಹರಿಸಲಾಗಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್,  ಹೊಸ PMPVTG ಅಭಿವೃದ್ಧಿ ಮಿಷನ್ ಮೂಲಕ 15,000 ಕೋಟಿ ರೂಪಾಯಿಗಳನ್ನು ಬುಡಕಟ್ಟು ಗುಂಪುಗಳ ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಮತ್ತು ಮೂಲಭೂತ ಸೌಲಭ್ಯಗಳೊಂದಿಗೆ ಅವರ ವಾಸಸ್ಥಾನಗಳನ್ನು ಸ್ಯಾಚುರೇಟ್ ಮಾಡಲು ಮೀಸಲಿಟ್ಟಿದ್ದಾರೆ. ಈ ವರ್ಷ ಚುನಾವಣೆ ನಡೆಯಲಿರುವ ಹಲವು ರಾಜ್ಯಗಳಲ್ಲಿ ಬುಡಕಟ್ಟು ಜನಸಂಖ್ಯೆ ಹೆಚ್ಚಿದೆ. ಏಕಲವ್ಯ ಮಾದರಿ ವಸತಿ ಶಾಲೆಗಳಿಗೆ ಕಳೆದ ಬಜೆಟ್‌ನಲ್ಲಿ 2,000 ಕೋಟಿ ರೂಪಾಯಿ ನೀಡಲಾಗಿತ್ತು, ಅದನ್ನು 5,943 ಕೋಟಿ ರೂಪಾಯಿಗೆ ಹೆಚ್ಚಿಸಲಾಗಿದೆ.  

ಹೊಸ ತೆರಿಗೆ ಪದ್ಧತಿ

ಹೊಸ ತೆರಿಗೆ ಪದ್ಧತಿಯಲ್ಲಿ ಘೋಷಿಸಲಾದ ರಿಯಾಯಿತಿಗಳು, ಕಡಿಮೆ ಅಥವಾ ಮಧ್ಯಮ ಆದಾಯವನ್ನು ಗಳಿಸುವ, ಯಾವುದೇ ವಿನಾಯಿತಿಗಳನ್ನು ಪಡೆಯಲು ಬಯಸದ ಯುವ ಮತದಾರರನ್ನು ಆಕರ್ಷಿಸುವ ನಿರೀಕ್ಷೆಯಿದೆ. ಹಳೆಯ ತೆರಿಗೆ ಆಡಳಿತದ ಅಡಿಯಲ್ಲಿ, 80C, ಭವಿಷ್ಯ ನಿಧಿ ಮತ್ತು ವಸತಿ ಸಾಲದ ಅಸಲು ಮತ್ತು ಬಡ್ಡಿ ಪಾವತಿಗಳಂತಹ ವಿನಾಯಿತಿಗಳನ್ನು ಇನ್ನೂ ಪಡೆಯಬಹುದು. ನರೇಂದ್ರ ಮೋದಿ ಸರ್ಕಾರಕ್ಕೆ ಸವಾಲು ಎಂದರೆ ತೆರಿಗೆ ಪಾವತಿದಾರರು ಹಳೆಯ ತೆರಿಗೆ ಪದ್ಧತಿಯಿಂದ ಹೊಸ ತೆರಿಗೆ ಪದ್ಧತಿಗೆ ಬದಲಾಗುವಂತೆ ಮನವಿ ಮಾಡುವುದು. ಈ ವರ್ಷದಿಂದ ಹೊಸ ತೆರಿಗೆ ಪದ್ಧತಿಯನ್ನು ಡೀಫಾಲ್ಟ್ ಪದ್ಧತಿಯನ್ನಾಗಿಯೂ ಮಾಡಲಾಗಿದೆ.

ಹೊಸ ತೆರಿಗೆ ಪದ್ಧತಿಯಲ್ಲಿ 7 ಲಕ್ಷ ರೂಪಾಯಿವರೆಗಿನ ಆದಾಯ ಹೊಂದಿರುವ ವ್ಯಕ್ತಿಗಳು ತೆರಿಗೆ ಪಾವತಿಸಬೇಕಾಗಿಲ್ಲ. 9 ಲಕ್ಷ ರೂಪಾಯಿ ವಾರ್ಷಿಕ ಆದಾಯ ಹೊಂದಿರುವ ವ್ಯಕ್ತಿ ಕೇವಲ 45,000 ರೂಪಾಯಿಗಳನ್ನು ಆದಾಯ ತೆರಿಗೆಯಾಗಿ ಪಾವತಿಸಬೇಕಾಗುತ್ತದೆ. ಅದು ಆತನ ಆದಾಯದಲ್ಲಿ ಕೇವಲ 5 ಪ್ರತಿಶತ ಮಾತ್ರವಾಗಿರುತ್ತದೆ. ಇದರೊಂದಿಗೆ ಪಾವತಿಸಬೇಕಾದ ತೆರಿಗೆ ಮೇಲೆ ಶೇ.25 ರಷ್ಟು ಕಡಿತವಾದಂತಾಗಿದೆ. ಹೀಗೆ ಅನೇಕ ಜನಪ್ರಿಯ ಯೋಜನೆಗಳ ಮೇಲೆ ಗಮನವಿಟ್ಟು ಮಂಡಿಸಿರುವ ಕೇಂದ್ರ ಬಜೆಟ್‌ ಮುಂದಿನ ಚುನಾವಣೆಗೆ ರಾಜಕೀಯ ಸಂದೇಶಗಳನ್ನು ರವಾನಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read