ಮೆಟ್ರೋ ಪ್ರಯಾಣಿಕರ ಅನುಕೂಲಕ್ಕಾಗಿ ಎಂಜಿ ರಸ್ತೆ ಮತ್ತು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಗಳಲ್ಲಿ ಪೂರ್ವ ನಿಗದಿತ ಆಟೋ-ರಿಕ್ಷಾ ಕೌಂಟರ್‌ಗಳನ್ನು ತೆರೆಯಲಾಗಿದೆ.
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತದ (ಬಿಎಂಆರ್‌ಸಿಎಲ್) ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ಮತ್ತು ವಿಶೇಷ ಪೊಲೀಸ್ ಆಯುಕ್ತ (ಸಂಚಾರ) ಎಂ ಎ ಸಲೀಂ ಅವರು ಕೌಂಟರ್‌ಗಳನ್ನು ಉದ್ಘಾಟಿಸಿದರು. ಈ ಆಟೋರಿಕ್ಷಾ ಕೌಂಟರ್ ಗಳು ವರ್ಷವಿಡೀ ಪ್ರತಿದಿನ ಬೆಳಿಗ್ಗೆ 7 ರಿಂದ 12.30 ರವರೆಗೆ ತೆರೆದಿರುತ್ತವೆ.
ಪ್ರಯಾಣಿಕರು ಸರ್ಕಾರ ನಿಗದಿಪಡಿಸಿದ ದರವನ್ನು ಪಾವತಿಸಬೇಕು: ಮೊದಲ ಎರಡು ಕಿಲೋಮೀಟರ್‌ಗಳಿಗೆ 30 ರೂ. ಮತ್ತು ನಂತರದ ಪ್ರತಿ ಕಿಲೋಮೀಟರ್‌ಗೆ 15 ರೂ.ಪಾವತಿಸಬೇಕು. ರಾತ್ರಿ 10 ರಿಂದ ಬೆಳಿಗ್ಗೆ 5 ರ ನಡುವಿನ ದರವು ಪ್ರಮಾಣಿತ ಶುಲ್ಕಕ್ಕಿಂತ ಒಂದೂವರೆ ಪಟ್ಟು ಹೆಚ್ಚಾಗಿರುತ್ತದೆ.
ಬನಶಂಕರಿ, ಬೈಯಪ್ಪನಹಳ್ಳಿ ಮತ್ತು ನಾಗಸಂದ್ರ ಮೆಟ್ರೋ ನಿಲ್ದಾಣಗಳ ಪ್ರವೇಶ/ನಿರ್ಗಮನ ದ್ವಾರಗಳಲ್ಲಿ ಇಂತಹ ಇನ್ನಷ್ಟು ಕೌಂಟರ್‌ಗಳು ಶೀಘ್ರದಲ್ಲೇ ತೆರೆಯಲಿವೆ. ನಾಗಸಂದ್ರಕ್ಕೆ ಎರಡು ಕೌಂಟರ್ ಸಿಗಲಿದೆ ಎಂದು ಬಿ ಎಂ ಆರ್ ಸಿ ಎಲ್ ಪ್ರಕಟಣೆಯಲ್ಲಿ ತಿಳಿಸಿದೆ.
ಬುಕಿಂಗ್ ವಿವರಗಳು
ಪ್ರಯಾಣಿಕರು ಕೌಂಟರ್‌ನಲ್ಲಿ ತಮ್ಮ ಗಮ್ಯಸ್ಥಾನವನ್ನು ನಮೂದಿಸಬೇಕು ಮತ್ತು ಆಟೋ ಚಾಲಕನ ಹೆಸರು, ಫೋನ್ ಸಂಖ್ಯೆ, ಆಟೋ-ರಿಕ್ಷಾ ನೋಂದಣಿ ಸಂಖ್ಯೆ, ಗಮ್ಯಸ್ಥಾನದ ವಿಳಾಸ, ಪ್ರಯಾಣಿಕರ ಫೋನ್ ಸಂಖ್ಯೆ ಮತ್ತು ಪ್ರಯಾಣದ ಕೊನೆಯಲ್ಲಿ ಪಾವತಿಸಬೇಕಾದ ಪ್ರಯಾಣ ದರವನ್ನು ಒಳಗೊಂಡಿರುವ ಪ್ರಯಾಣ ಚೀಟಿಯನ್ನು ಕೌಂಟರ್ ನಲ್ಲಿ ಸಂಗ್ರಹಿಸಿಕೊಳ್ಳಬೇಕು.
ಪ್ರಯಾಣಿಕರು ಕೌಂಟರ್‌ನಲ್ಲಿ 2 ರೂಪಾಯಿ ಸೇವಾ ಶುಲ್ಕವನ್ನು ಸಹ ಪಾವತಿಸಬೇಕಾಗುತ್ತದೆ.
ರಿಫ್ರೆಶ್‌ಮೆಂಟ್ ಸ್ಟಾಲ್ ಆರಂಭ
ಬಿಎಂಆರ್‌ಸಿಎಲ್ ಎಂಜಿ ರಸ್ತೆಯ ಮೆಟ್ರೋ ನಿಲ್ದಾಣದಲ್ಲಿ ಜ್ಯೂಸ್ ಕೇಂದ್ರವನ್ನು ತೆರೆದಿದೆ. ಮುಂದಿನ ದಿನಗಳಲ್ಲಿ ನಾಡಪ್ರಭು ಕೆಂಪೇಗೌಡ ಮೆಜೆಸ್ಟಿಕ್, ನಾಗಸಂದ್ರ, ಸರ್ ಎಂ ವಿಶ್ವೇಶ್ವರಯ್ಯ (ಸೆಂಟ್ರಲ್ ಕಾಲೇಜು) ಮತ್ತು ಚಿಕ್ಕಪೇಟೆ ಮೆಟ್ರೊ ನಿಲ್ದಾಣಗಳಲ್ಲಿ ಇನ್ನೂ ನಾಲ್ಕು ಸ್ಟಾಲ್ ತೆರೆಯಲು ಯೋಜಿಸಿದೆ.