ಮಕ್ಕಳಿಗೆ ಚಿಕ್ಕಿ ಎಂದರೆ ತುಂಬಾ ಇಷ್ಟ. ಬೆಲ್ಲ ಹಾಕಿ ಇದನ್ನು ಮಾಡುವುದರಿಂದ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಮನೆಯಲ್ಲಿ ಸುಲಭವಾಗಿ ಎಳ್ಳಿನ ಚಿಕ್ಕಿ ಮಾಡಬಹುದು. ಮಕ್ಕಳ ಸ್ನ್ಯಾಕ್ಸ್ ಡಬ್ಬಕ್ಕೂ ಇದು ಹೇಳಿ ಮಾಡಿಸಿದ್ದು.
ಬೇಕಾಗುವ ಸಾಮಾಗ್ರಿಗಳು:
ಬಿಳಿ ಎಳ್ಳು-1 ಕಪ್, 1 ಕಪ್ ಬೆಲ್ಲ, ತುಪ್ಪ-1 ಟೇಬಲ್ ಸ್ಪೂನ್.
ಮಾಡುವ ವಿಧಾನ:
ಮೊದಲಿಗೆ ಒಂದು ಪ್ಯಾನ್ ಗೆ ಎಳ್ಳನ್ನು ಹಾಕಿ ಅದು ಸ್ವಲ್ಪ ಚಟಪಟ ಅನ್ನುವವರೆಗೆ ಹುರಿಯಿರಿ. ನಂತರ ಒಂದು ಪಾತ್ರೆಗೆ ಬೆಲ್ಲ ಹಾಕಿ ಅದಕ್ಕೆ ಸ್ವಲ್ಪ ನೀರು ಹಾಕಿ ಕರಗಿಸಿಕೊಳ್ಳಿ. ನಂತರ ಚಿಕ್ಕಿ ಮಾಡುವ ಪಾತ್ರೆಗೆ ಈ ಕರಗಿಸಿಟ್ಟುಕೊಂಡು ಬೆಲ್ಲದ ಪಾಕವನ್ನು ಸೋಸಿಕೊಳ್ಳಿ.
ನಂತರ ಗ್ಯಾಸ್ ಹಚ್ಚಿ ಈ ಪಾತ್ರೆಯನ್ನು ಒಲೆಯ ಮೇಲಿಡಿ. ಇದಕ್ಕೆ 1 ಟೇಬಲ್ ಸ್ಪೂನ್ ತುಪ್ಪ ಹಾಕಿ ಕುದಿಸಿಕೊಳ್ಳಿ. ಪಾಕ ಬರುವವರೆಗೆ ಚೆನ್ನಾಗಿ ಕೈಯಾಡಿಸಿ. ನಂತರ ಇದಕ್ಕೆ ಹುರಿದಿಟ್ಟುಕೊಂಡ ಎಳ್ಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ, ನಂತರ ಒಂದು ತಟ್ಟೆಗೆ ತುಪ್ಪ ಸವರಿಟ್ಟುಕೊಳ್ಳಿ. ನಂತರ ಇದಕ್ಕೆ ಎಳ್ಳಿನ ಮಿಶ್ರಣವನ್ನು ಹಾಕಿ ಸಮತಟ್ಟು ಮಾಡಿಕೊಂಡು ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿಕೊಳ್ಳಿ.