BREAKING : ವೃಕ್ಷಮಾತೆ ‘ಸಾಲು ಮರದ ತಿಮ್ಮಕ್ಕ’ ನಿಧನ : ಸಚಿವ ಈಶ್ವರ್ ಖಂಡ್ರೆ ಸಂತಾಪ.!

ಬೆಂಗಳೂರು : ವೃಕ್ಷಮಾತೆ ‘ಸಾಲು ಮರದ ತಿಮ್ಮಕ್ಕ’ (114) ನಿಧನರಾಗಿದ್ದು, ಸಚಿವ ಈಶ್ವರ್ ಖಂಡ್ರೆ ಸಂತಾಪ ಸೂಚಿಸಿದ್ದಾರೆ.

ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿದ ಸಚಿವರು ”ಪದ್ಮಶ್ರೀ ಗೌರವಕ್ಕೆ ಪಾತ್ರರಾಗಿದ್ದ, ವೃಕ್ಷಮಾತೆ ಎಂದೇ ಜನಮನದಲ್ಲಿ ಅಕ್ಷರಶಃ ಅಚ್ಚಳಿಯದೇ ಉಳಿದಿರುವ ಸಾಲುಮರದ ತಿಮ್ಮಕ್ಕ ಅವರ ನಿಧನ ಸುದ್ದಿ ನನಗೆ ಅತ್ಯಂತ ದುಃಖ ತಂದಿದೆ.ತಿಮ್ಮಕ್ಕನವರು ಕರ್ನಾಟಕದ ಹೆಮ್ಮೆಯ ಪರಿಸರ ಪ್ರಚಾರಕರಾಗಿದ್ದರು. ಮಕ್ಕಳಿಲ್ಲದ ಈ ಮಹಾತಾಯಿ, ಮರಗಳನ್ನೇ ಮಕ್ಕಳಂತೆ ಬೆಳೆಸಿ ಹಸಿರಿನ ಮಹತ್ವವನ್ನು ಜಗತ್ತಿಗೆ ಸಾರಿದ ಅಪರೂಪದ ವ್ಯಕ್ತಿತ್ವ. ಅನಕ್ಷರಸ್ಥೆಯಾಗಿದ್ದರೂ ಪರಿಸರ ಸಂರಕ್ಷಣೆಯ ಮಹೋನ್ನತ ಸೇವೆಗಾಗಿ ಗೌರವ ಡಾಕ್ಟರೇಟ್ ಹಾಗೂ ಪದ್ಮಶ್ರೀ ಸೇರಿದಂತೆ ಅನೇಕ ರಾಷ್ಟ್ರೀಯ-ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಗಳಿಸಿದ್ದರು”.

”ತಮಗೆ ಪದ್ಮಶ್ರೀ ಪ್ರಶಸ್ತಿ ನೀಡಿದ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ತಲೆಗೆ ಕರುಣೆಯಿಂದ ಕೈಯಿಟ್ಟು ಆಶೀರ್ವಾದ ನೀಡಿದ ಅವರ ಸರಳತೆ, ಮನುಜತ್ವ ಎಂದಿಗೂ ಮರೆಯಲಾಗದು. ಅಂದಿನ ರಾಷ್ಟ್ರಪತಿಗಳೂ ಕೂಡ ಅದೇ ಮಗುತನದಿಂದ ಅವರ ಆಶೀರ್ವಾದ ಸ್ವೀಕರಿಸಿದ್ದರು.ತುಮಕೂರು ಜಿಲ್ಲೆಯ ಗುಬ್ಬಿಯವರು ಆಗಿದ್ದ ತಿಮ್ಮಕ್ಕನವರು, ಮಾಗಡಿ ತಾಲ್ಲೂಕಿನ ಹುಲಿಕಲ್ ಗ್ರಾಮದಲ್ಲಿ ನೆಲೆಸಿದ ಬಳಿಕ ತಮ್ಮ ಜೀವನದ ನೋವನ್ನು ಮರೆಯಲು ಗಂಡ ಬಿಕ್ಕಲ ಚಿಕ್ಕಯ್ಯರೊಂದಿಗೆ ರಾಜ್ಯ ಹೆದ್ದಾರಿ 94ರ ಕುದೂರಿನಿಂದ ಹುಲಿಕಲ್ ತನಕ 385 ಆಲದ ಮರಗಳನ್ನು ನೆಟ್ಟು ಪಾಲಿಸಿ ಬೆಳೆಸಿದರು. ಆ ಮರಗಳು ಇಂದಿಗೂ ನೂರಾರು ಪಕ್ಷಿಗಳಿಗೆ ಆಶ್ರಯವಾಗಿವೆ, ಪ್ರಯಾಣಿಕರಿಗೆ ಶಾಂತಿಯ ನೆರಳಾಗಿವೆ. ಅವರ ಜೀವನದಿಂದ ಪ್ರೇರಣೆ ಪಡೆದು ಅನೇಕ ಯುವಕರು ವೃಕ್ಷ ಸಂರಕ್ಷಣೆಯಲ್ಲಿ ತೊಡಗಿದ್ದಾರೆ.ನಮ್ಮ ಇಲಾಖೆ ಸಾಲುಮರದ ತಿಮ್ಮಕ್ಕ ಅವರ ಸ್ಮರಣಾರ್ಥ ವೃಕ್ಷೋದ್ಯಾನಗಳನ್ನು ಸ್ಥಾಪಿಸಿರುವುದು ನನಗೆ ಸಂತಸ ತಂದಿದೆ’.

‘ವೃಕ್ಷೋ ರಕ್ಷತಿ ರಕ್ಷಿತಃ’ — ಮರಗಳನ್ನು ರಕ್ಷಿಸಿದ ತಿಮ್ಮಕ್ಕನವರು ಇಂದು ವಿಶ್ವ ಮಾನ್ಯತೆ ಪಡೆದಿದ್ದಾರೆ. ಬಿಬಿಸಿಯ ಜಗತ್ತಿನ 100 ಪ್ರಭಾವಿ ಮಹಿಳೆಯರಲ್ಲಿ ಸ್ಥಾನ ಪಡೆದಿರುವುದು ಅವರ ಸೇವಾ ಚೇತನತೆಗೆ ದೊರೆತ ಗೌರವ.
ಅವರ ಜೀವನ, ಸೇವೆಯ ಕುರಿತು ನಡೆಸಿದ ಅನೇಕ ಅಧ್ಯಯನಗಳು, ಪ್ರೌಢ ಪ್ರಬಂಧಗಳು ಸಮಾಜಕ್ಕೆ ಶಾಶ್ವತ ಬೆಳಕು.
ಅಂತಹ ಮಹಾನ್ ಆತ್ಮ ಅಗಲಿರುವುದು ಅಪ್ರತಿಮ ನಷ್ಟ. ಅಗಲಿದ ಹಿರಿಯ ಜೀವಕ್ಕೆ ನಾನು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುತ್ತೇನೆ ಎಂದು ಸಚಿವರು ಟ್ವೀಟ್ ಮಾಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read