ಹಾಸನ: ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆ(HIMS))ನ್ನು ಮತ್ತಷ್ಟು ಅಭಿವೃದ್ಧಿಪಡಿಸಿ ಹಾಸನ ಜಿಲ್ಲೆಯ ಜನರ ಆರೋಗ್ಯದ ಅವಶ್ಯಕತೆಗಳನ್ನು ಸಮರ್ಪಕವಾಗಿ ಪೂರೈಸಲು ನಮ್ಮ ಸರ್ಕಾರ ಮತ್ತೊಂದು ಹೆಜ್ಜೆಯನ್ನು ಇಟ್ಟಿದೆ ಎಂದು ಕಂದಾಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದ್ದಾರೆ.
ಹಾಸನ ಜಿಲ್ಲೆಯ ಉಸ್ತುವಾರಿ ಜವಾಬ್ದಾರಿಯನ್ನು ವಹಿಸಿಕೊಂಡ ಕೂಡಲೇ ಸೆಪ್ಟೆಂಬರ್ 22 ರಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ನಿರ್ಮಾಣ, ನಿಂತಿದ್ದ ಕಾಮಗಾರಿ ಪೂರ್ಣಗೊಳಿಸಲು ರೂ.9 ಕೋಟಿಗೂ ಹೆಚ್ಚು ಅನುದಾನ ಮಂಜೂರು ಮಾಡಲಾಗಿದೆ. ಕಟ್ಟಡ ಬಾಕಿ ಕಾಮಗಾರಿ ಪೂರ್ಣಗೊಳಿಸುವ ಕೆಲಸ ನಡೆದಿದೆ.
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸಂಪೂರ್ಣ ಕಾರ್ಯ ರೂಪಕ್ಕೆ ತರಲು ಮತ್ತೊಂದು ದೊಡ್ಡ ಹೆಜ್ಜೆಯನ್ನು ನಮ್ಮ ಸರ್ಕಾರ ಇಟ್ಟಿದೆ. ಸೆಪ್ಟೆಂಬರ್ 6 ರಂದು ಸದರಿ ಆಸ್ಪತ್ರೆಗೆ ಭೇಟಿ ನೀಡಿ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ತುರ್ತಾಗಿ ಕಾರ್ಯ ಪ್ರಾರಂಭಿಸಲು, ಪ್ರಾಥಮಿಕ ಹಂತದಲ್ಲಿ ಕಾರ್ಡಿಯಾಲಿಜಿ, ನ್ಯೂರಾಲಜಿ, ನ್ಯೂರೋಸರ್ಜರಿ, ಯುರಾಲಜಿ ಮತ್ತು ಕಾರ್ಡಿಯಾ ಥೊರಾಸಿಕ್ ಸರ್ಜರಿ ವಿಭಾಗಗಳಿಗೆ ಅವಶ್ಯಕವಿರುವ ಉಪಕರಣ ಮತ್ತು ಪಿಠೋಪಕರಣಗಳು ಹಾಗೂ ಇದಕ್ಕೆ ಅವಶ್ಯ ಅನುದಾನದ ಅಂದಾಜು ವೆಚ್ಚಕ್ಕೆ ಪ್ರಸ್ತಾವನೆ ಸಲ್ಲಿಸಲು ಹಾಗೂ ಕ್ಯಾತ್ ಲ್ಯಾಬ್ ಸೌಲಭ್ಯಗಳನ್ನು ಒಳಗೊಂಡು ಕಾರ್ಡಿಯಾಕ್ ಯುನಿಟ್‌ನ್ನು ಸ್ಥಾಪಿಸಲು ಅಗತ್ಯ ಅನುದಾನದ ಅಂದಾಜು ಮೊತ್ತಕ್ಕೆ ಮನವಿ ಸಲ್ಲಿಸಲು ಸೂಚಿಸಲಾಗಿತ್ತು. ಇದರಂತೆ, ವೈದ್ಯಕೀಯ ಉಪಕರಣಗಳು, ಅವಶ್ಯ ಪೀಠೋಪಕರಣಗಳು ಮತ್ತು ಕ್ಯಾತ್ ಲ್ಯಾಬ್‌ನೊಂದಿಗೆ ಕಾರ್ಡಿಯಾಕ್ ಯುನಿಟ್ ಒಳಗೊಂಡು 5 ಸೂಪರ್ ಸ್ಪೆಷಾಲಿಟಿ ವಿಭಾಗಗಳನ್ನು ಆರಂಭಿಸಲು ಒಟ್ಟು ರೂ. 27.93 ಕೋಟಿ ಅನುದಾನದ ಅವಶ್ಯಕತೆಯನ್ನು ಭರಿಸಲು ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆ (HIMS) ರವರು ಪ್ರಸ್ತಾವನೆ ಸಲ್ಲಿಸಿದ್ದಾರೆ.
ಸಚಿವ ಸಂಪುಟ ಸಭೆಯಲ್ಲಿ ಸರ್ಕಾರ ರೂ.27.93 ಕೋಟಿ ಪ್ರಸ್ತಾವನೆಗೆ ಅನುಮೋದನೆ ಮಾಡಿ ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆ ((HIMS)) ಸೂಪರ್ ಸ್ಪೇಷಲಿಟಿ ಆಸ್ಪತ್ರೆಯನ್ನು ತ್ವರಿತವಾಗಿ ಕಾರ್ಯರೂಪಕ್ಕೆ ತರಲು ತೀರ್ಮಾನಿಸಿದೆ. ಹಾಸನ ಜಿಲ್ಲೆಯ ಜನರ ಆರೋಗ್ಯದ ಅವಶ್ಯಕತೆಗಳನ್ನು ಸಮರ್ಪಕವಾಗಿ ಪೂರೈಸಲು ಇದು ಸಹಕಾರಿಯಾಗಲಿದೆ. ನಮ್ಮ ಮನವಿಗೆ ಸ್ಪಂದಿಸಿ, ಹಾಸನ ಜಿಲ್ಲೆಯ ಜನರ ದ್ವನಿಗೆ ಗೌರವಿಸಿ ರೂ.27.93 ಕೋಟಿ ಪ್ರಸ್ತಾವನೆಗೆ ಒಪ್ಪಿಗೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ವೈದ್ಯಕೀಯ ಶಿಕ್ಷಣ ಸಚಿವರಿಗೆ ಕೃಷ್ಣ ಬೈರೇಗೌಡ ಅವರು ಧನ್ಯವಾದ ತಿಳಿಸಿದ್ದಾರೆ.
