ಲಖನೌ: ಒಂಭತ್ತು ರಾಜ್ಯಗಳು ಹಾಗೂ ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರೀಷ್ಕರಣೆ-SIR ಪ್ರಕ್ರಿಯೆಯಲ್ಲಿ ಅಧಿಕಾರಿಗಳು, ಸಿಬ್ಬಂದಿಗಳ ಮೇಲೆ ಹೆಚ್ಚುತ್ತಿರುವ ಒತ್ತಡಗಳಿಂದಾಗಿ ಕೆಲವರು ಆತ್ಮಹತ್ಯೆಗೆ ಶರಣಾಗಿದ್ದರೆ, ಮತ್ತೆ ಹಲವರು ಒತ್ತಡದಿಂದ ಸಾವನ್ನಪ್ಪುತ್ತ್ರ್ಯ್ವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕರ್ತವ್ಯಕ್ಕೆ ಬೂತ್ ಮಟ್ಟದ ಅಧಿಕಾರಿಯಾಗಿ ನಿಯೋಜನೆಗೊಂಡಿದ್ದ ಜೀವಶಾಸ್ತ್ರ ಶಿಕ್ಷಕ ಒತ್ತಡದಿಂದಾಗಿ ಮಿದುಳಿನ ರಕ್ತಸ್ರಾವದಿಂದ ಸಾವನ್ನಪ್ಪಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಮೋದಿ ವಿಜ್ಞಾನ ಮತ್ತು ವಾಣಿಜ್ಯ ಅಂತರ ಕಾಲೇಜಿನ ಶಿಕ್ಷಕ ಲಾಲ್ ಮೋಹನ್ ಸಿಂಗ್ (58) ಮೃತ ದುರ್ದೈವಿ. ಮೆದುಳಿನ ರಕ್ತಸ್ರಾವದಿಂದ ಲಾಲ್ ಮೋಹನ್ ಮೃತಪಟ್ಟಿದ್ದಾಗಿ ಜಿಲ್ಲಾಡಳಿತ ಮಾಹಿತಿ ನೀಡಿದೆ.
ಲಾಲ್ ಮೋಹನ್ ಅವರನ್ನು ಸಾಹಿಬಾಬಾದ್ ಕ್ಷೇತ್ರದಲ್ಲಿ ಎಸ್ ಐಆರ‍್ ಕರ್ತವ್ಯಕ್ಕೆ ನೇಮಿಸಲಾಗಿತ್ತು. ಕೆಲಸದಿಂದ ತೀವ್ರ ಒತ್ತಡಕ್ಕೆ ಸಿಲುಕಿದ್ದರು. ಕಾರಣ ಜಿಲ್ಲಾಡಳಿತ ವೇಗವಾಗಿ ಕೆಲಸ ಮುಗಿಸಬೇಕು ಎಂದು ಎಚ್ಚರಿಕೆ ನೀಡಿತ್ತು. ಒತ್ತಡ ತಡೆಯಲಾಗದೇ ತೀವ್ರ ಅಸ್ವಸ್ಥರಾಗಿದ್ದರು. ತಡರಾತ್ರಿ ಇದ್ದಕ್ಕಿದ್ದಂತೆ ಮೆದುಳಿನ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾರೆ ಎಂದು ಪ್ರಾಂಶುಪಾಲ ಸತೀಶ್ ಚಂದ್ರ ಅಗರ್ವಾಲ್ ತಿಳಿಸಿದ್ದಾರೆ.
