ಬೆಂಗಳೂರು: ಡಿಸೆಂಬರ್ 8ರಿಂದ ಬೆಳಗಾವಿಯಲ್ಲಿ ಅಧಿವೇಶನ ಆರಂಭವಾಗಲಿದೆ. ಬೆಳಗಾವಿ ಅಧಿವೇಶನದಲ್ಲಿ ಸರ್ಕಾರ ಸಮರ್ಥವಾಗಿ ವಿಪಕ್ಷಗಳನ್ನು ಎದುರಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಇಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಆಹ್ವಾನದ ಮೇರೆಗೆ ಬೆಳಗಿನ ಉಪಹಾರಕ್ಕಾಗಿ ಅವರ ನಿವಾಸಕ್ಕೆ ಭೇಟಿ ನೀಡಿದೆ. ಕಾಂಗ್ರೆಸ್ ಪಕ್ಷದ ವಿಚಾರಗಳನ್ನು ಈ ಭೇಟಿಯಲ್ಲಿ ಚರ್ಚಿಸಲಾಗಿದೆ. ಡಿಸೆಂಬರ್ 8 ರಂದು ಬೆಳಗಾವಿ ಅಧಿವೇಶನ ಪ್ರಾರಂಭವಾಗಲಿದ್ದು, ವಿಪಕ್ಷಗಳನ್ನು ಎದುರಿಸಲು ಸರ್ಕಾರದ ರಣನೀತಿಗಳ ಬಗ್ಗೆ ಇಂದು ಚರ್ಚಿಸಲಾಗಿದೆ. ವಿಪಕ್ಷಗಳು ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲಿದ್ದಾರೆ ಎಂಬ ಮಾಹಿತಿ ಪತ್ರಿಕೆಗಳಿಂದ ತಿಳಿದು ಬಂದಿದೆ.ಅಲ್ಲದೇ ವಿಪಕ್ಷಗಳು ಕೇಳಬಹುದಾದ ಪ್ರಶ್ನೆಗಳನ್ನು ಸಮರ್ಥವಾಗಿ ಸರ್ಕಾರ ಎದುರಿಸಲಿದೆ. ಕಬ್ಬು, ಮೆಕ್ಕೆಜೋಳದ ಸಮಸ್ಯೆ ಸೇರಿದಂತೆ ರಾಜ್ಯದ ಸಮಸ್ಯೆಗಳಿಗೆ ಸಮರ್ಪಕ ಪರಿಹಾರಗಳನ್ನು ಕಂಡುಕೊಳ್ಳಲು ಈ ಅಧಿವೇಶನದಲ್ಲಿ ಪ್ರಯತ್ನಿಸಲಾಗುವುದು ಎಂದರು.
ನಮ್ಮ ಸರ್ಕಾರ ರೈತಪರ ನಿಲುವನ್ನು ಹೊಂದಿದೆ. ಕಬ್ಬು ಬೆಲೆ ನಿಗದಿಗೆ ಸಂಬಂಧಿಸಿದಂತೆ ಸರ್ಕಾರ ರೈತರು, ರೈತ ಮುಖಂಡರು,ಕಾರ್ಖಾನೆ ಮಾಲಿಕರ ಜೊತೆ ಚರ್ಚಿಸಿ, ಸಮಸ್ಯೆಯ ಪರಿಹಾರಕ್ಕೆ ಅಂತಿಮ ರೂಪವನ್ನು ನೀಡಲಾಗಿದೆ. ಕಬ್ಬು ಒಂದು ಟನ್ ಗೆ ಸರ್ಕಾರದಿಂದ 50 ರೂ. ನಿಗದಿಪಡಿಸಲಾಗಿದೆ. ಮೆಕ್ಕೆ ಜೋಳ ಖರೀದಿಯ ಬಗ್ಗೆ ರೈತರು, ಡಿಸ್ಟಲರಿ ಕಾರ್ಖಾನೆ ಮಾಲೀಕರ ಜೊತೆ ಚರ್ಚಿಸಲಾಗಿದೆ. ಕೇಂದ್ರ ಸರ್ಕಾರ ಮೆಕ್ಕೆಜೋಳಕ್ಕೆ 2,400 ರೂ.ಗಳನ್ನು ಬೆಂಬಲ ಬೆಲೆಯಾಗಿ ನಿಗದಿಪಡಿಸಿದೆ. ಆದರೆ ಮಾರುಕಟ್ಟೆ ದರ 1900 ರಿಂದ 2100 ರೂ.ವೆರೆಗಿರುವುದರಿಂದ ಡಿಸ್ಟಲರಿ ಕಂಪನಿಗಳು , ಎಂಎಸ್ ಪಿ ದರದಲ್ಲಿಯೇ ರೈತರಿಂದ ಮೆಕ್ಕೆಜೋಳವನ್ನು ಖರೀದಿಸಬೇಕೆಂದು ಮನವೊಲಿಸಲಾಗುತ್ತಿದೆ. ಅಂತೆಯೇ ಪೌಲ್ಟ್ರಿ ಫಾರಂಗಳು , ಪಶುಆಹಾರಗಳಿಗಾಗಿ ಮೆಕ್ಕೆ ಜೋಳವನ್ನು ಬಳಸಲಾಗುತ್ತದೆ ಎಂದರು.
ಈ ಬಾರಿ ರೈತರು ಮೆಕ್ಕೆ ಜೋಳವನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆದಿದ್ದು, ಸುಮಾರು 55 ಲಕ್ಷ ಮೆ.ಟನ್ ಉತ್ಪಾದನೆಯಾಗುವ ಅಂದಾಜಿದೆ ಎಂದರು.
ಪೌಲ್ಟ್ರಿಯಲ್ಲಿ 20 ಲಕ್ಷಕ್ಕಿಂತ ಹೆಚ್ಚು ಉತ್ಪಾದಿಸುವ ನಿರೀಕ್ಷೆಯಿದೆ. ಪಶುಆಹಾರ 4-5 ಲಕ್ಷ ಟನ್ ಹಾಗೂ 7-10 ಲಕ್ಷದ ಎಥನಾಲ್ ಗಾಗಿ ಬಳಸುತ್ತಾರೆ. ಇದೆಲ್ಲಾ ಕೇಂದ್ರ ಸರ್ಕಾರ ಮಾಡಬೇಕು .ಎಥನಾಲ್ ಹಾಗೂ ಎಂ ಎಸ್ ಪಿ, ಎಫ್ ಆರ್ ಪಿ ನಿಗದಿ ಮಾಡುವುದು ಕೇಂದ್ರ ಸರ್ಕಾರ. ಆದರೆ ಕೇಂದ್ರ ಸರ್ಕಾರದವರು ನಮಗೇನು ಜವಾಬ್ದಾರಿ ಇಲ್ಲವೆಂಬಂತೆ ಮಾತನಾಡುತ್ತಾರೆ. ಸಂಸದರ ಸಭೆ ಕರೆಯಬೇಕು ಎಂದು ಚರ್ಚಿಸಲಾಗಿದ್ದು, ಡಿಸೆಂಬರ್ 8 ರಂದು ಸಂಸತ್ತು ಮುಂದೂಡಬಹುದೆಂದು ಭಾವಿಸಿದ್ದು, ಅಂದೇ ಸಭೆ ಕರೆಯಬೇಕೆಂದು ತೀರ್ಮಾನಿಸಲಾಗಿದೆ ಎಂದರು. ಏಕೆಂದರೆ ಅಂದು ರಾಜ್ಯದ ಸಂಸದರು ಅಲ್ಲಿಯೇ ಉಪಸ್ಥಿತರಿರುತ್ತಾರೆ ಎಂದರು.
