ಮಂಗಳೂರು: ಮಂಗಳೂರು ಹೊರ ವಲಯದಲ್ಲಿ ಬೀದಿ ನಾಯಿ ದಾಳಿಗೆ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ. ಆಘಾತಕಾರಿ ಘಟನೆಯಲ್ಲಿ ಮೃತ ವ್ಯಕ್ತಿಯ ಕಣ್ಣುಗುಡ್ಡೆಯನ್ನೇ ದಾಳಿ ಮಾಡಿದ ನಾಯಿ ತಿಂದು ಹಾಕಿದೆ.
ದಯಾನಂದ್(60) ಮೃತಪಟ್ಟ ವ್ಯಕ್ತಿ. ದಕ್ಷಿಣ ಕನ್ನಡ ಜಿಲ್ಲೆ ಉಳ್ಳಾಲ ತಾಲೂಕಿನ ಕುಂಪಲ ಬೈಪಾಸ್ ಸಮೀಪ ಜನವಸತಿ ಪ್ರದೇಶದಲ್ಲಿ ರಕ್ತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಬೀದಿ ನಾಯಿಯನ್ನು ಪುರಸಭೆ ಸಿಬ್ಬಂದಿ ಹಿಡಿದಿದ್ದಾರೆ.
ಕುಂಪಲ ನಿವಾಸಿ ದಯಾನಂದ್ ಅವಿವಾಹಿತರಾಗಿದ್ದು, ಮದ್ಯ ಸೇವಿಸುತ್ತಿದ್ದರು. ಸ್ಥಳೀಯವಾಗಿ ನೇಮ, ಕೋಲ, ಜಾತ್ರೆಗಳಿಗೆ ಹೋಗಿ ಕುಂಪಲದ ಅಂಗಡಿ ಮುಂಭಾಗ ಮಲಗಿ ಬೆಳಗ್ಗೆ ಮನೆ ಸೇರುತ್ತಿದ್ದರು. ಇಂದು ಬೆಳಗಿನ ಜಾವ ಅಂಗಡಿಯೊಂದರ ಮುಂಭಾಗ ದಯಾನಂದ್ ಇದ್ದಿದ್ದನ್ನು ಅಂಗಡಿಯ ಮಾಲೀಕ ವಿನೋದ್ ನೋಡಿದ್ದಾರೆ. ಬೆಳಗ್ಗೆ 7.30 ರ ಸುಮಾರಿಗೆ ಅಂಗಡಿಯೊಂದರ ಬಳಿ ರಕ್ತಸಿಕ್ತವಾಗಿದ್ದ ಕಣ್ಣುಗುಡ್ಡೆ ಕಂಡುಬಂದಿದೆ. ಮತ್ತಷ್ಟು ಹುಡುಕಾಟ ಪರಿಶೀಲನೆ ನಡೆಸಿದಾಗ ಅಂಗಡಿ ಸಮೀಪದ ಮನೆಯೊಂದರ ಬಳಿ ದಯಾನಂದ್ ಮೃತದೇಹ ರಕ್ತಸಿಕ್ತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅದರ ಪಕ್ಕದಲ್ಲಿ ನಾಯಿ ಕೂಡ ಕಂಡುಬಂದಿದ್ದು, ನಾಯಿ ದಾಳಿ ಮಾಡಿ ಕೊಂದು ಹಾಕಿದೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಉಳ್ಳಾಲ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಸ್ಥಳೀಯರಲ್ಲಿ ಆಘಾತ ಮೂಡಿಸಿದೆ. ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ.
