ಬೆಂಗಳೂರು: ಸ್ನಾನಕ್ಕೆ ಹೋಗಿದ್ದ ವೇಳೆ ಗ್ಯಾಸ್ ಗೀಸರ್ ಸೋರಿಕೆಯಾಗಿ ತಾಯಿ, ಮಗು ಸಾವನ್ನಪ್ಪಿದ ಘಟನೆ ಗೋವಿಂದರಾಜ ನಗರದ ಪಂಚಶೀಲ ನಗರದಲ್ಲಿ ಸೋಮವಾರ ನಡೆದಿದೆ.
ಕಿರಣ್ ಎಂಬುವರ ಪತ್ನಿ ಚಾಂದಿನಿ(30) ಮತ್ತು ಪುತ್ರಿ ಯುವಿ ಕಿರಣ್(4) ಮೃತಪಟ್ಟವರು. ಮಧ್ಯಾಹ್ನ 1 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಕಿರಣ್ ಕಾರ್ಪೆಂಟರ್ ಆಗಿ ಕೆಲಸ ಮಾಡುತ್ತಿದ್ದು, ಚಾಂದಿನಿ ಮತ್ತು ಇಬ್ಬರು ಪುತ್ರಿಯರೊಂದಿಗೆ ಪಂಚಮಶೀಲ ನಗರದಲ್ಲಿ ವಾಸವಾಗಿದ್ದಾರೆ.
ಸೋಮವಾರ ಅವರು ಎಂದಿನಂತೆ ಕೆಲಸಕ್ಕೆ ಹೋಗಿದ್ದರು. ಮಧ್ಯಾಹ್ನ ಚಾಂದಿನಿ ತಮ್ಮ ಪುತ್ರಿ ಯುವಿಗೆ ಸ್ನಾನ ಮಾಡಿಸಲು ಹೋಗಿದ್ದು ಬಾಗಿಲು ಮತ್ತು ಕಿಟಕಿಗಳನ್ನು ಮುಚ್ಚಿಕೊಂಡಿದ್ದಾರೆ. ಗೀಸರ್ ಗ್ಯಾಸ್ ನಿಂದ ಕಾರ್ಬನ್ ಮೊನಾನಕ್ಸೈಡ್ ಅನಿಲ ಸೋರಿಕೆಯಾಗಿ ಇಬ್ಬರು ಅಸ್ವಸ್ಥಗೊಂಡು ಬಿದ್ದಿದ್ದಾರೆ.
ಶಾಲೆಗೆ ಹೋಗಿದ್ದ ಕಿರಣ್ ಅವರ ಮೊದಲ ಪುತ್ರಿಯನ್ನು ಕಿರಣ್ ಸಹೋದರ ಮನೆಗೆ ಕರೆದುಕೊಂಡು ಬಂದು ಬಾಗಿಲು ಬಡಿದಿದ್ದಾರೆ. ಯಾರೂ ಕೂಡ ಸ್ಪಂದಿಸಿಲ್ಲ. ಕೊನೆಗೆ ಬಾಗಿಲು ಒಡೆದು ಒಳಗೆ ಹೋಗಿ ನೋಡಿದಾಗ ತಾಯಿ, ಮಗಳು ಸ್ನಾನದ ಕೋಣೆಯಲ್ಲಿ ಬಿದ್ದಿರುವುದು ಕಂಡು ಬಂದಿದೆ. ಕೂಡಲೇ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ವೇಳೆ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ಮೃತಪಟ್ಟಿದ್ದಾರೆ. ಇಬ್ಬರ ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆ ನಡೆಸಿ ಮಂಗಳವಾರ ಕುಟುಂಬ ಸದಸ್ಯರಿಗೆ ನೀಡಲಾಗುವುದು. ಗೋವಿಂದರಾಜ ನಗರ ಠಾಣೆ ಪೋಲೀಸರು ಪರಿಶೀಲನೆ ನಡೆಸಿದ್ದಾರೆ.
