ಬೆಂಗಳೂರು : ವಾಹನ ತಪಾಸಣಾ/ಪರೀಶೀಲನೆ ಸಮಯದಲ್ಲಿ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು ವಾಹನ ಚಾಲಕರಿಗೆ ಕಿರುಕುಳ ಹಲ್ಲೆ. ಅವಾಚ್ಯ ಶಬ್ದಗಳ ಬಳಕೆ ಮಾಡಿ ದುರ್ನಡತೆ ತೋರುವುದನ್ನು ಕಡಿವಾಣ ಹಾಕಲು ಸೂಕ್ತ ಸುತ್ತೋಲೆ/ಆದೇಶ ನೀಡುವ ಬಗ್ಗೆ ಸುತ್ತೋಲೆ ಹೊರಡಿಸಲಾಗಿದೆ.
ಈ ಮೇಲ್ಕಂಡ ವಿಷಯಕ್ಕೆ ಸಂಬಂದಿಸಿದಂತೆ ರಾಜ್ಯ ಪೊಲೀಸ್ ಇಲಾಖೆಯು ಶಿಸ್ತಿನ ಇಲಾಖೆಯಾಗಿದ್ದು ಕೆಲವು ಅಧಿಕಾರಿ ಸಿಬ್ಬಂದಿಗಳು ತೋರುತ್ತಿರುವ ದುರ್ನಡತೆ, ಅಧಿಕಾರ ದುರ್ಬಳಕೆಯಿಂದ ಸಂಪೂರ್ಣ ಪೊಲೀಸ್ ಇಲಾಖೆಯ ಗೌರವಕ್ಕೆ ಧಕ್ಕೆ ಉಂಟಾಗುತ್ತಿದ್ದು ಕಾಲಕಾಲಕ್ಕೆ ಇಲಾಖೆಯಿಂದ ಹಲವಾರು ಸುತ್ತೋಲೆ ಜ್ಞಾಪನಗಳನ್ನು ಹೊರಡಿಸಿದ್ದರು ಕೆಲವು ಪೊಲೀಸ್ ಸಿಬ್ಬಂದಿಗಳು ವಾಹನ ತಪಾಸಣಾ ಸಂದರ್ಭದಲ್ಲಿ ವಾಹನ ಚಾಲಕರ ಮೇಲೆ ದೌರ್ಜನ್ಯ, ಹಲ್ಲೆ, ಕಿರುಕುಳ, ಅವಹೇಳನಕಾರಿ ಅವಾಚ್ಯ ಶಬ್ದಗಳ ಬಳಕೆ ಮಾಡಿ ಸಾರ್ವಜನಿಕ ಸ್ಥಳಗಳಲ್ಲಿ ವಾಗ್ವಾದಕ್ಕಿಳಿದು ಅವಮಾನ ಮಾಡುವಂತಹ ಘಟನೆಗಳು ನಿರಂತರವಾಗಿ ನಡೆಯುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ವರದಿಯಾಗುತ್ತಿರುತ್ತವೆ, ಕೆಲವು ದಿನಗಳ ಹಿಂದೆ ಮಂಡ್ಯ ಜಿಲ್ಲೆಯಲ್ಲಿ ಸಂಚಾರಿ ಪೊಲೀಸರು ವಾಹನ ತಪಾಸಣಾ ಸಂದರ್ಭದಲ್ಲಿ ಮಗು ಮೃತಪಟ್ಟ ಪ್ರಕರಣ ಹಾಗೂ ವಿಜಯನಗರ ಜಿಲ್ಲೆ ಕೂಡ್ಲಿಗಿಯಲ್ಲಿ ಸಾರಿಗೆ ಬಸ್ ಚಾಲಕನ ಮೇಲೆ ಪೊಲೀಸ್ ಪೇದೆಯಿಂದ ನಡೆದ ಹಲ್ಲೆಯು ರಾಜ್ಯಾದ್ಯಂತ ವೈರಲ್ ಆದ ಘಟನೆಯನ್ನು ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರವು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ವಿಚಾರಣೆ ಕೈಗೊಂಡಿರುತ್ತಾದರೂ ವಾರದ ಹಿಂದೆ ಚಿತ್ರದುರ್ಗದಲ್ಲಿ ವಾಹನ ಪರೀಶೀಲನೆ ವೇಳೆಯಲ್ಲಿ ಆಟೋ ಚಾಲಕನಿಗೆ ಪೊಲೀಸ್ ಸಿಬ್ಬಂದಿ ಕಿರುಕುಳ ನೀಡಿದ್ದರಿಂದ ಮನನೊಂದ ಚಾಲಕ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ, ಸಂಡೂರಿನಲ್ಲಿ ಲಾರಿ ಚಾಲಕನ ಮೇಲೆ ಪೊಲೀಸ್ ಸಿಬ್ಬಂದಿಯೊಬ್ಬ ದೌರ್ಜನ್ಯವೆಸಗಿದ ಘಟನೆಗಳು ಸಾಮಾಜಿಕ ಜಾಲತಾಣದಲ್ಲಿ ರಾಜ್ಯಮಟ್ಟದಲ್ಲಿ ವೈರಲ್ ಆಗಿರುತ್ತವೆ, ಇಂತಹ ಪ್ರಕರಣಗಳು ದಿನನಿತ್ಯ ಮರುಕಳಿಸುತ್ತಿರುವುದರಿಂದ ರಾಜ್ಯ ಪೊಲೀಸ್ ಇಲಾಖೆಗೆ ಅಪಕೀರ್ತಿತರುತ್ತಿರುವುದಲ್ಲದೇ ಜನವಿರೋಧಿ ಇಲಾಖೆ ಎನ್ನುವಂತೆ ಸಾರ್ವಜನಿಕ ವಲಯದಲ್ಲಿ ಬಿಂಬಿತವಾಗುತ್ತಿರುತ್ತದಲ್ಲದೆ ಶಿಸ್ತನ್ನು ಕಾಪಾಡಿಕೊಂಡು ಪ್ರಾಮಾಣಿಕತೆ, ದಕ್ಷತೆಯಿಂದ ಕಾರ್ಯನಿರ್ವಹಿಸುವ ಸಿಬ್ಬಂದಿಗಳನ್ನು ಸಹ ಅಗೌರವದಿಂದ ನೋಡುವಂತಾಗುತ್ತಿರುತ್ತದೆ.
ಆದ್ದರಿಂದ ವಾಹನ ತಪಾಸಣೆ/ಪರೀಶೀಲನೆ ಸಂದರ್ಭದಲ್ಲಿ ಸಾರ್ವಜನಿಕ ಜೀವನದಲ್ಲಿ ವಾಹನ ಚಾಲನೆ ಮಾಡುವ ಎಲ್ಲಾ ರೀತಿಯ ವಾಹನಗಳ ಚಾಲಕರೊಂದಿಗೆ ಗೌರವದಿಂದ ವರ್ತಿಸುವಂತೆ ಹಾಗೂ ಮೇಲ್ಕಾಣಿಸಿದ ದುರ್ನಡತೆಗಳು ಮರುಕಳಿಸದಂತೆ ಸಿಬ್ಬಂದಿಗಳಿಗೆ ಸೂಕ್ತ ಸುತ್ತೋಲೆ/ನಿರ್ದೇಶನ ನೀಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ತಮ್ಮಲ್ಲಿ ಕೋರಿದೆ ಎಂದು ಸುತ್ತೋಲೆ ಹೊರಡಿಸಲಾಗಿದೆ.

