alex Certify ಇ‌ಲ್ಲಿದೆ ಟೀಂ ಇಂಡಿಯಾದ ಮುಖ್ಯ ಕೋಚ್​ ಆಗಿದ್ದ ರವಿಶಾಸ್ತ್ರಿ ಬಗ್ಗೆ ನಿಮಗೆ ಗೊತ್ತಿಲ್ಲದ ಇಂಟ್ರಸ್ಟಿಂಗ್‌ ಸಂಗತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇ‌ಲ್ಲಿದೆ ಟೀಂ ಇಂಡಿಯಾದ ಮುಖ್ಯ ಕೋಚ್​ ಆಗಿದ್ದ ರವಿಶಾಸ್ತ್ರಿ ಬಗ್ಗೆ ನಿಮಗೆ ಗೊತ್ತಿಲ್ಲದ ಇಂಟ್ರಸ್ಟಿಂಗ್‌ ಸಂಗತಿ

ಟೀಂ ಇಂಡಿಯಾದ ಮುಖ್ಯ ಕೋಚ್​ ಆಗಿ ಸೇವೆ ಸಲ್ಲಿಸಿರುವ ರವಿಶಾಸ್ತ್ರಿ, ನಮೀಬಿಯಾ ವಿರುದ್ಧ ಕೊಹ್ಲಿ ಪಡೆ ಗೆಲ್ಲುತ್ತಿದ್ದಂತೆಯೇ ತಮ್ಮ ಸ್ಥಾನದಿಂದ ಕೆಳಗಿಳಿದಿದ್ದಾರೆ. ಟೀಂ ಇಂಡಿಯಾ ಪಂದ್ಯಗಳಲ್ಲಿ ಸೋತಾಗ ಕೋಚ್​ ರವಿಶಾಸ್ತ್ರಿ ಕೂಡ ಟ್ರೋಲಿಗರ ಬಾಯಿಗೆ ಸಿಕ್ಕಿದ್ದಿದೆ. ಆದರೆ ರವಿ ಶಾಸ್ತ್ರಿ ತಂಡವನ್ನು ಮುನ್ನಡೆಸಿದ ರೀತಿ, ವಿದೇಶಿ ನೆಲದಲ್ಲಿ ಟೀಂ ಇಂಡಿಯಾವನ್ನು ಗೆಲ್ಲಿಸಿದ್ದು ಇವು ಯಾವುದನ್ನೂ ನಾವು ಮರೆಯುವಂತಿಲ್ಲ.

ಕೆಲ ವರ್ಷಗಳ ಕಾಲ ಟೀಂ ಇಂಡಿಯಾ ತಂಡದ ಮ್ಯಾನೇಜರ್​ ಆಗಿರುವ ಸುನಿಲ್​ ಸುಬ್ರಹ್ಮಣ್ಯಂ ಧರ್ಮಶಾಲಾದಲ್ಲಿ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ ಶ್ರೀಲಂಕಾ ವಿರುದ್ಧ ಸೋತ ದಿನವನ್ನು ಮೆಲುಕು ಹಾಕಿದ್ದಾರೆ. ಶಾಸ್ತ್ರಿ ರಾತ್ರಿ ವೇಳೆ ತಂಡದ ಸದಸ್ಯರನ್ನು ಕರೆದು ಸಭೆ ನಡೆಸಿದ್ದರು. 8 ಗಂಟೆಗೆ ಸರಿಯಾಗಿ ಎಲ್ಲರೂ ಸಭೆಗೆ ಹಾಜರಾಗಬೇಕು ಎಂದು ಹೇಳಿದ್ದರು. ನಾನಂತೂ ಇವತ್ತು ಏನೋ ಕಾದಿದೆ ಎಂದು ಹೆದರಿ ಹೋಗಿದ್ದೆ. ಆದರೆ ರವಿ ಶಾಸ್ತ್ರಿ ಮಾತ್ರ ಅಂತ್ಯಾಕ್ಷರಿ ಆಟವಾಡಿಸಲು ತಯಾರಿ ನಡೆಸುತ್ತಿದ್ದರಂತೆ..!

ರಾತ್ರಿ 2 ಗಂಟೆಯವರೆಗೂ ಧೋನಿ ಹಳೆಯ ಹಿಂದಿ ಹಾಡುಗಳನ್ನು ಗುನುಗುತ್ತಿದ್ದರು. ಅಲ್ಲಿಂದ ಎದ್ದು ಹೋಗುವಾಗ ಪ್ರತಿಯೊಬ್ಬರ ಮುಖದಲ್ಲೂ ಖುಷಿ ಇತ್ತು. ಹೀನಾಯ ಸೋಲಿನ ಕಹಿಯ ನಡುವೆಯೂ ಅಂದು ಎಲ್ಲರ ಮುಖದಲ್ಲಿ ಸಂತೋಷವಿತ್ತು. ಎಲ್ಲರೂ ಭವಿಷ್ಯದ ಗೆಲುವಿನತ್ತ ಮುಖ ಮಾಡಿದ್ದರು. ರವಿಶಾಸ್ತ್ರಿಗಿಂತ ಉತ್ತಮ ಕೋಚ್​ ಇನ್ನೊಬ್ಬರು ಬರಲು ಸಾಧ್ಯವೇ ಇಲ್ಲ. ರವಿಶಾಸ್ತ್ರಿಗೆ ಯಾವ ಸಮಯದಲ್ಲಿ ಏನು ಮಾಡಬೇಕು ಅನ್ನೋದು ಚೆನ್ನಾಗಿ ತಿಳಿದಿತ್ತು ಅಂತಾರೆ ಸುನಿಲ್ ಸುಬ್ರಹ್ಮಣ್ಯಂ.

ಕೇವಲ ಇಷ್ಟು ಮಾತ್ರವಲ್ಲ. ಯಾವ ಆಟಗಾರರ ಜೊತೆಯಲ್ಲಿ ಹೇಗೆ ಮಾತನಾಡಬೇಕು ಅನ್ನೋದು ರವಿಶಾಸ್ತ್ರಿ ಚೆನ್ನಾಗಿ ತಿಳಿದಿದ್ದರು. ವಾಷಿಂಗ್ಟನ್​ ಸುಂದರ್​ ಜೊತೆಯಲ್ಲಿ ರವಿ ಶಾಸ್ತ್ರಿ ಮಾತನಾಡುವ ರೀತಿಗೂ ಮಹಮ್ಮದ್​ ಶಮಿ ಜೊತೆ ಮಾತನಾಡುವ ರೀತಿಗೂ ಅಜಗಜಾಂತರ ವ್ಯತ್ಯಾಸವಿರುತ್ತಿತ್ತು. ಸುಂದರ್​ನಲ್ಲಿ ರವಿಶಾಸ್ತ್ರಿ ತಮ್ಮನ್ನೇ ಕಾಣುತ್ತಿದ್ದರು. ಒಬ್ಬ ಬೌಲರ್​ ಮನಸ್ಸು ಮಾಡಿದ್ರೆ ಚೆನ್ನಾಗಿ ಬ್ಯಾಟ್​ ಮಾಡಬಲ್ಲ ಎಂಬುದನ್ನು ಸುಂದರ್​ನಲ್ಲಿ ಕಂಡಿದ್ದರು. ಇದೇ ಕಾರಣಕ್ಕೆ ಸುಂದರ್​ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದರು.

ಕೆಲ ಸಮಯದ ಹಿಂದೆ ಮಹಮ್ಮದ್​ ಶಮಿ, ಪತ್ನಿಯಿಂದ ಅನೇಕ ಆರೋಪಗಳನ್ನು ಎದುರಿಸುತ್ತಿದ್ದರು. ಇದು ಅವರನ್ನು ಮಾನಸಿಕವಾಗಿ ಕುಗ್ಗಿಸಿತ್ತು. ಆದರೆ ಈ ಸಮಯದಲ್ಲಿ ಶಮಿ ಜೊತೆ ಮಾತನಾಡುತ್ತಿದ್ದ ರವಿಶಾಸ್ತ್ರಿ ಅವರ ಮನಸ್ಸು ಕ್ರಿಕೆಟ್​ ಕಡೆಯೇ ಚಿಂತಿಸುವಂತೆ ನೋಡಿಕೊಳ್ಳುತ್ತಿದ್ದರು. ಕ್ರಿಕೆಟ್​ನಲ್ಲಿ ಯಶಸ್ಸು ಕಂಡರೆ ಶಮಿ ನೋವನ್ನು ಮರೆಯುತ್ತಾರೆ ಎಂಬುದು ರವಿಶಾಸ್ತ್ರಿ ಲೆಕ್ಕಾಚಾರವಾಗಿತ್ತು. ಹೀಗಾಗಿ ಶಮಿಯಲ್ಲಿ ಆತ್ಮವಿಶ್ವಾಸವನ್ನು ತುಂಬುವ ಕೆಲಸ ಮಾಡುತ್ತಿದ್ದರು.

ಜಸ್ಪ್ರಿತ್​ ಬೂಮ್ರಾ ಕೂಡ ರವಿಶಾಸ್ತ್ರಿ ಗರಡಿಯಲ್ಲಿಯೇ ಉತ್ತಮ ಪ್ರದರ್ಶನ ನೀಡಿದ್ದಾರೆ. ಒಂದು ಸಮಯದಲ್ಲಿ ಸಾಕಷ್ಟು ಗಾಯಗಳಿಂದ ಆಟದಲ್ಲಿ ಹಿನ್ನಡೆ ಅನುಭವಿಸುತ್ತಿದ್ದ ಬೂಮ್ರಾರನ್ನು ವೈಯಕ್ತಿಕವಾಗಿ ಕರೆದಿದ್ದ ಶಾಸ್ತ್ರಿ ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಕೆಲಸ ಮಾಡಿದ್ದರು. ನೀನು ಆಟಕ್ಕೆ ಮರಳಲೇಬೇಕು. ನೀನೊಬ್ಬ ಚಾಂಪಿಯನ್​. ಇಂತಹ ಗಾಯಗಳು ನಿನ್ನ ಬೌಲಿಂಗ್​ ಸಾಮರ್ಥ್ಯವನ್ನು ಕುಗ್ಗಿಸಲು ಸಾಧ್ಯವೇ ಇಲ್ಲ ಎಂದು ಧೈರ್ಯ ತುಂಬಿದ್ದರು. ಈ ರೀತಿ ಸರಿಯಾದ ಸಮಯದಲ್ಲಿ ಸರಿಯಾದ ನಿರ್ಣಯ ಹಾಗೂ ಸರಿಯಾದ ಮಾತುಗಳನ್ನು ಆಡುತ್ತಿದ್ದ ರವಿ ಶಾಸ್ತ್ರಿ ಟೀಂ ಇಂಡಿಯಾ ಪಾಲಿಗೆ ಎಂಟಾನೆ ಬಲದಂತೆ ಇದ್ದಿದ್ದಂತೂ ಸುಳ್ಳಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...