alex Certify ಹಸ್ತಾಂತರಗೊಂಡ 6 ತಿಂಗಳಲ್ಲೇ ಹಾಳಾದ ರೈಲ್ವೆ ಮೇಲ್ಸೇತುವೆ: ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸೂಚನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಸ್ತಾಂತರಗೊಂಡ 6 ತಿಂಗಳಲ್ಲೇ ಹಾಳಾದ ರೈಲ್ವೆ ಮೇಲ್ಸೇತುವೆ: ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸೂಚನೆ

ಹುಬ್ಬಳ್ಳಿ: ಲಕ್ಷ್ಮೇಶ್ವರ-ಮುನವಳ್ಳಿ ರಾಜ್ಯ ಹೆದ್ದಾರಿಯಲ್ಲಿ ಕುಂದಗೋಳ ತಾಲೂಕಿನ ಶಿರೂರ ಗ್ರಾಮದ ಬಳಿ ನಿರ್ಮಿಸಿರುವ ರೇಲ್ವೇ ಮೇಲ್ಸೇತುವೆ ಪೂರ್ಣಗೊಂಡು ಹಸ್ತಾಂತರವಾದ 6 ರಿಂದ 7 ತಿಂಗಳಲ್ಲಿ ಹಾನಿಗೊಳಗಾಗಿರುವುದು ಅದರ ಕಳಪೆ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ. ಈ ಕುರಿತು ಕಾಮಗಾರಿ ಕೈಗೊಂಡ ಗುತ್ತಿಗೆದಾರರು, ನಿರ್ವಹಿಸಿದ ಅಂದಿನ ಕೆ.ಆರ್.ಡಿ.ಸಿ.ಎಲ್. ಅಧಿಕಾರಿಗಳನ್ನು ಹೊಣೆ ಮಾಡಬೇಕು. ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸುವ ಕುರಿತು ವಿವರವಾದ ವರದಿಯನ್ನು ಸರ್ಕಾರಕ್ಕೆ ನೀಡಲು ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ.

ಕೇಂದ್ರ ಸಂಸದೀಯ ವ್ಯವಹಾರಗಳು, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ ಇಂದು ಶಿರೂರ ಬಳಿ ಹಾನಿಗೀಡಾಗಿರುವ ರೇಲ್ವೆ ಮೇಲ್ಸೇತುವೆ ಸ್ಥಳಕ್ಕೆ ಭೇಟಿ ನೀಡಿ, ವೀಕ್ಷಣೆ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಸೇತುವೆಯು ಒಂದೇ ದಿನದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಹಾನಿಗೀಡಾಗಲು ಸಾಧ್ಯವಿಲ್ಲ. ಕಾಮಗಾರಿ ಕಳಪೆಯಾಗಿ ಕೈಗೊಂಡು ಹಸ್ತಾಂತರ ಮಾಡಿದ್ದಾರೆ. ಈ ಕುರಿತು ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಸಚಿವರೊಂದಿಗೂ ಚರ್ಚಿಸಲಾಗಿದೆ. ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಹಾಗೂ ವೆಚ್ಚ ಮಾಡಿದ ಹಣ ಮರು ವಸೂಲಿ ಮಾಡಲು ಕ್ರಮ ಕೈಗೊಳ್ಳಬೇಕು. ಜಿಲ್ಲಾಧಿಕಾರಿಗಳು ವಿವರವಾದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿದ್ದಾರೆ ಎಂದರು.

ಶಾಸಕಿ ಕುಸುಮಾವತಿ ಶಿವಳ್ಳಿ ಮಾತನಾಡಿ, ಕಾಮಗಾರಿ ಶೀಘ್ರ ಪ್ರಾರಂಭಿಸಬೇಕು. ಪೂರ್ಣ ಪ್ರಮಾಣದಲ್ಲಿ ವಾಹನ  ಸಂಚಾರ ಪ್ರಾರಂಭವಾದರೆ ತೊಂದರೆಯಾಗುತ್ತದೆ.ಪರ್ಯಾಯ ರಸ್ತೆ ಕಲ್ಪಿಸಬೇಕು ಎಂದರು.

ರಾಜ್ಯ ಕೃಷಿ ಉತ್ಪನ್ನ ರಫ್ತು ನಿಗಮದ ಅಧ್ಯಕ್ಷ ಎಸ್.ಐ.ಚಿಕ್ಕನಗೌಡ್ರ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಲೋಕೋಪಯೋಗಿ ಕಾರ್ಯನಿರ್ವಾಹಕ ಇಂಜಿನಿಯರ್ ಎಸ್.ಬಿ.ಚೌಡಣ್ಣವರ ಮತ್ತಿತರರು ಉಪಸ್ಥಿತರಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...