ವರ್ಕ್ ಫ್ರಮ್ ಹೋಮ್ ಕೆಲಸ ಕೊಡಿಸುತ್ತೇವೆ ಎಂದು ನಂಬಿಸಿ ಹಣ ಪೀಕುವುದು ಸದ್ಯ ಸೈಬರ್ ವಂಚಕರ ಹೊಸ ಅಭ್ಯಾಸವಾಗಿದೆ. ಕಳೆದ ಕೆಲವು ತಿಂಗಳಲ್ಲಿ ವರ್ಕ್ ಫ್ರಮ್ ಹೋಮ್ನಿಂದ ಮನೆಯಲ್ಲಿ ಕುಳಿತು ಸಾವಿರಾರು ರೂಪಾಯಿ ಗಳಿಸಬಹುದು ಎಂಬ ಆಕರ್ಷಣೆಗೆ ಬಿದ್ದ ಅನೇಕರು ಲಕ್ಷಗಟ್ಟಲೇ ಹಣ ಕಳೆದುಕೊಂಡಿದ್ದಾರೆ. ಇತ್ತೀಚೆಗಷ್ಟೇ ಅಹಮದಾಬಾದ್ನ ಮೊರೈಯಾ ಮೂಲದ ವ್ಯಕ್ತಿಯೊಬ್ಬರು ಆನ್ಲೈನ್ ವಂಚನೆಗೆ ಬಿದ್ದು 40 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.
3D ಡಿಸೈನರ್ ಆಗಿ ಕೆಲಸ ಮಾಡುವ ದೇವಾಂಗ್ ಚೌಹಾನ್ ಅವರು ಸುಲಭವಾಗಿ ಹಣ ಗಳಿಸುವ ನಕಲಿ ಆಫರ್‌ಗೆ ಬಿದ್ದು 40 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಏಪ್ರಿಲ್ 21 ರಂದು ಚೌಹಾಣ್ ವಾಟ್ಸಾಪ್‌ನಲ್ಲಿ ಅರೆಕಾಲಿಕ ಉದ್ಯೋಗದ ಕುರಿತು ಅಪರಿಚಿತ ಸಂಖ್ಯೆಯಿಂದ ಸಂದೇಶವನ್ನು ಸ್ವೀಕರಿಸಿದ್ದಾರೆ ಎಂದು ವರದಿಯಾಗಿದೆ. ಅದರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು, ಅವರು ತಕ್ಷಣವೇ ನೀಡಿದ ಸಂಖ್ಯೆಗೆ ಕರೆ ಮಾಡಿದರು, ಅಲ್ಲಿ ವ್ಯಕ್ತಿ, ಕೆಲವು YouTube ವೀಡಿಯೊಗಳನ್ನು ಲೈಕ್ ಮಾಡುವ ಮತ್ತು ಪ್ರಚಾರ ಮಾಡುವ ಕೆಲಸವನ್ನು ನೀಡಿದರು. ವೀಡಿಯೊಗಳನ್ನು ಲೈಕ್ ಮಾಡಿದ್ದಕ್ಕಾಗಿ ಉತ್ತಮ ಹಣವನ್ನು ನೀಡುವುದಾಗಿ ಅವರು ದೇವಾಂಗ್ಗೆ ಭರವಸೆ ನೀಡಿದ್ದರು.
ಪ್ರತಿ ಗಂಟೆಗೆ ಮೂರು ವೀಡಿಯೊಗಳನ್ನು ಲೈಕ್ ಮಾಡಲು ಮತ್ತು ಆಯಾ ಯೂಟ್ಯೂಬ್ ಚಾನೆಲ್‌ಗಳಿಗೆ ಚಂದಾದಾರರಾಗಲು ಪ್ರತಿ ಯುಟ್ಯೂಬ್ ಚಾನೆಲ್ಗೆ 50 ರೂಪಾಯಿಗಳನ್ನು ಕೊಡೋದಾಗಿ ಹೇಳಿದ್ದರು. ಅಲ್ಲದೇ 150 ರೂಪಾಯಿಗಳ ಮೊದಲ ಪಾವತಿಯನ್ನೂ ಮಾಡಿದ್ದರು. ಇದಾದ ಬಳಿಕ ಟೆಲಿಗ್ರಾಂ ಗ್ರೂಪ್ ಒಂದಕ್ಕೆ ದೇವಾಂಗ್ರನ್ನು ಆ್ಯಡ್ ಮಾಡಲಾಯ್ತು.
ಕೆಲಸ ಆರಂಭಿಸುವ ಮೊದಲು, 1,500 ರೂ. ಪ್ರಿಪೇಯ್ಡ್ ಶುಲ್ಕವನ್ನು ಪಾವತಿಸಲು ಕೇಳಲಾಯಿತು ಎಂದು ದೇವಾಂಗ್ ಹೇಳಿದ್ದಾರೆ. ಕೆಲಸ ಮುಗಿದ ಬಳಿಕ 1500 ರೂಪಾಯಿಗಳ ಜೊತೆ 400 ರೂಪಾಯಿ ಸೇರಿಸಿ ವಾಪಸ್ ನೀಡಲಾಯ್ತು. ಇದಾದ ಬಳಿಕ ದೇವಾಂಗ್ ಹೆಚ್ಚು ಹಣವನ್ನು ಹೂಡಿಕೆ ಮಾಡಿದ್ದು ಪ್ರತಿಯಾಗಿ ಆ ಕಂಪನಿಯು ಒಂದು ಪೈಸಾ ಕೂಡ ಮರಳಿ ನೀಡದೇ ದೋಖಾ ಮಾಡಿದೆ.
ಜಹನ್ವಿ ಸಿಂಗ್, ಮೋನಾ, ರೋಸಾನಾ ಹಾಗೂ ಲೂಸಿ ಎಂಬ ಹೆಸರಿನ ಮಹಿಳೆಯರು ದೇವಾಂಗ್ಗೆ ಕರೆ ಮಾಡುತ್ತಿದ್ದರು. ದೊಡ್ಡ ಮಟ್ಟದ ಹೂಡಿಕೆ ಮಾಡಿದ ಬಳಿಕ ಯಾರೂ ಮರಳಿ ತನಗೆ ಕರೆ ಮಾಡಲಿಲ್ಲ ಎಂದು ದೇವಾಂಗ್ ತಿಳಿಸಿದ್ದಾರೆ.