alex Certify BIG NEWS: ಜವಾಬ್ದಾರಿಯಿಂದ ನುಣುಚಿಕೊಳ್ಳಲು ಹೆಸರಿಲ್ಲದ ಕಠಿಣ ಲಾಕ್ ಡೌನ್; ಜನ ಹೊರಗೆ ಬಂದರೆ ದನಕ್ಕೆ ಬಡಿದಂತೆ ಬಡಿಯುವ ಕ್ರಮ; ಸರ್ಕಾರದ ವಿರುದ್ಧ ಕುಮಾರಸ್ವಾಮಿ ಆಕ್ರೋಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಜವಾಬ್ದಾರಿಯಿಂದ ನುಣುಚಿಕೊಳ್ಳಲು ಹೆಸರಿಲ್ಲದ ಕಠಿಣ ಲಾಕ್ ಡೌನ್; ಜನ ಹೊರಗೆ ಬಂದರೆ ದನಕ್ಕೆ ಬಡಿದಂತೆ ಬಡಿಯುವ ಕ್ರಮ; ಸರ್ಕಾರದ ವಿರುದ್ಧ ಕುಮಾರಸ್ವಾಮಿ ಆಕ್ರೋಶ

ಬೆಂಗಳೂರು: ಕೊರೊನಾ ನಿಯಂತ್ರಿಸಲು ರಾಜ್ಯ ಸರ್ಕಾರ ಇಂದಿನಿಂದ ಜಾರಿ ಮಾಡಿರುವ ಕಠಿಣ ಕ್ರಮ ಎಂಬ ಲಾಕ್ ಡೌನ್ ಬಗ್ಗೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಕಿಡಿ ಕಾರಿದ್ದು, ಜನಸಂಚಾರ ತಡೆಯುವುದೇ ಲಾಕ್ ಡೌನ್ ಎಂದು ಭಾವಿಸಿರುವ ಸರ್ಕಾರ ಸಂಕಷ್ಟದಲ್ಲಿರುವ ನಾಗರಿಕರನ್ನು ಮರೆತಿರುವುದು ದುರಂತ ಎಂದು ಹೇಳಿದ್ದಾರೆ.

ಲಾಕ್ ಡೌನ್ ಅಲ್ಲದ ಕಠಿಣ ಲಾಕ್ ಡೌನ್, ಜನ ಹೊರಗೆ ಬಂದರೆ ದನಕ್ಕೆ ಬಡಿದಂತೆ ಬಡಿಯುವ ಲಾಕ್ ಡೌನ್ ಇಂದಿನಿಂದ ಜಾರಿಗೆ ಬರಲಿದೆ. ಜನಸಂಚಾರ ತಡೆಯುವುದೇ ಲಾಕ್ ಡೌನ್ ಎಂದು ಭಾವಿಸಿರುವ ಸರ್ಕಾರ ಸಂಕಷ್ಟದಲ್ಲಿ ನಾಗರಿಕರನ್ನು ಮರೆತಿರುವುದು ದುರಂತ. ನಾವು ಸೂಚಿಸಿದ ಲಾಕ್ ಡೌನ್ ಇದಾಗಿರಲಿಲ್ಲ. ನಾವು ಹೇಳಿದ್ದು ಜನಹಿತದ ಲಾಕ್ ಡೌನ್ ಆಗಿತ್ತು ಎಂದು ಸರಣಿ ಟ್ವೀಟ್ ಮೂಲಕ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜನರಿಗೆ ಎಲ್ಲಿ ಪರಿಹಾರ ನೀಡಬೇಕಾಗುತ್ತದೆಯೋ, ಜೀವನ ನಿರ್ವಹಣೆಗೆ ನೆರವು ನೀಡಬೇಕಾಗಿ ಬರುತ್ತದೆಯೋ ಎಂಬ ದುರಾಲೋಚನೆ ಮಾಡಿರುವ ಸರ್ಕಾರ ಲಾಕ್ ಡೌನ್ ಎಂಬ ಪದವನ್ನು ಧೈರ್ಯದಿಂದ ಹೇಳುತ್ತಲೇ ಇಲ್ಲ. ಕಠಿಣ ನಿಯಮ ಎಂದು ಹೇಳಿ ಲಾಕ್ ಡೌನ್ ನಿಂದ ದೂರ ನಿಂತಿದೆ. ಕೇಂದ್ರವೂ ಇದೇ ಕುತಂತ್ರದ ನಡೆಯನ್ನು ಅನುಸರಿಸಿ ಜವಾಬ್ದಾರಿಯಿಂದ ನುಣುಚಿಕೊಂಡಿದೆ.

ಲಾಕ್ ಡೌನ್ ಎಂದರೆ ಜನ ಹೊರ ಹೋಗಲಾಗದ ಪರಿಸ್ಥಿತಿ. ಬದುಕಿನ ಅಗತ್ಯವನ್ನು ದುಡಿದುಕೊಳ್ಳಲಾಗದ ದುಸ್ಥಿತಿ. ಸರ್ಕಾರವೇ ಇದರ ಹೊಣೆಗಾರ, ಅದಕ್ಕೆ ಸರ್ಕಾರವೇ ಪರಿಹಾರ ನೀಡಬೇಕು ಎಂಬುದೂ ನನ್ನ ಸಲಹೆ. ಸರ್ಕಾರ ಸಂಪೂರ್ಣ ಲಾಕ್ ಡೌನ್ ಘೋಷಿಸಬೇಕಿತ್ತು ಮತ್ತು ಪರಿಹಾರ ನೀಡಬೇಕಿತ್ತು. ಆದರೆ ಈವರೆಗೆ ಪರಿಹಾರ ಪ್ಯಾಕೇಜ್ ನ ಮಾತೇ ಇಲ್ಲ. ಮಹಾರಾಷ್ಟ್ರ, ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಕೇಂದ್ರ ಸರ್ಕಾರಕ್ಕೆ ಕಾಯದೇ ಲಾಕ್ ಡೌನ್ ಮಾಡಿವೆ. ಜನರಿಗೆ ಆಹಾರ ಸೇರಿದಂತೆ ಪರಿಹಾರ ಘೋಷಿಸಿವೆ. ಆಂಧ್ರದಲ್ಲಿ ಸೋಂಕಿತರಿಗೆ ಉಚಿತ ಚಿಕಿತ್ಸೆ ಸಿಗುತ್ತಿದೆ. ಇದು ಸರ್ಕಾರಗಳ ಜವಾಬ್ದಾರಿಯುತ ನಡೆ. ಆದರೆ, ಜವಾಬ್ದಾರಿಯಿಂದ ನುಣುಚಿಕೊಳ್ಳುವ ಕೇಂದ್ರದ ದುರ್ನಡೆಯನ್ನು ರಾಜ್ಯ ಅನುಸರಿಸಬಾರದು ಎಂದಿದ್ದಾರೆ.

ಮನೆಗಳಿಂದ ಹೊರ ಬರುವ ಜನರ ಮೇಲೆ ದರ್ಪ ಪ್ರದರ್ಶಿಸುವುದನ್ನು ಬಿಟ್ಟು, ಜನ ಹೊರಗೆ ಬಾರದಂತೆ ಅವರ ಅಗತ್ಯಗಳನ್ನು ಪೂರೈಸುವ, ಪರಿಹಾರ ಒದಗಿಸುವ ಕ್ರಮಗಳತ್ತ ಸರ್ಕಾರ ಗಮನಹರಿಸಬೇಕು. ಈ ವಿಚಾರದಲ್ಲಿ ನೆರೆ ರಾಜ್ಯಗಳು ಅನುಸರಿಸುತ್ತಿರುವ ಕ್ರಮಗಳನ್ನು ರಾಜ್ಯ ಅವಲೋಕಿಸಬೇಕು. ಜನರ ಆರೋಗ್ಯ ಎಷ್ಟು ಮುಖ್ಯವೋ ಜನರ ಬದುಕೂ ಅಷ್ಟೇ ಮುಖ್ಯವಾಗಬೇಕು ಎಂದು ಸಲಹೆ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...