ಬೆಂಗಳೂರು: ಆರ್. ಆರ್. ನಗರ ಉಪ ಚುನಾವಣೆಗೆ ಬಿಜೆಪಿ ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್, ನೂರಕ್ಕೆ ನೂರರಷ್ಟು ಮುನಿರತ್ನ ಅವರಿಗೆ ಟಿಕೆಟ್ ಸಿಗುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಸಚಿವರು, ಬಿಜೆಪಿ ಕೊಟ್ಟ ಮಾತನ್ನು ಎಂದಿಗೂ ತಪ್ಪಿಲ್ಲ. ಹೀಗಾಗಿ ಮುನಿರತ್ನ ಅವರಿಗೆ ಆರ್.ಆರ್. ನಗರ ಕ್ಷೇತ್ರದಿಂದ ಟಿಕೆಟ್ ಸಿಗುವ ವಿಶ್ವಾಸವಿದೆ. ಇಂದು ಸಂಜೆ ವೇಳೆಗೆ ಬಿಜೆಪಿ ಹೈಕಮಾಂಡ್ ಈ ಬಗ್ಗೆ ಅಂತಿಮವಾಗಿ ಘೋಷಿಸಲಿದೆ ಎಂದು ತಿಳಿಸಿದರು.
ಆರ್.ಆರ್. ನಗರ ಕ್ಷೇತ್ರದಿಂದ ಮುನಿರತ್ನ ಅವರಿಗೆ ಬಿಜೆಪಿ ಟಿಕೆಟ್ ನೀಡುವುದು ಬಹುತೇಕ ಖಚಿತವಾಗಿದ್ದು ಈಗಾಗಲೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿರುವ ಮುನಿರತ್ನ ಮಾತುಕತೆ ನಡೆಸಿದ್ದಾರೆ.