ಹಾಲಿವುಡ್ ನ ಸೈನ್ಸ್ ಫಿಕ್ಷನ್ ಚಿತ್ರಗಳಲ್ಲಿ ಕಾಣಿಸಿಕೊಳ್ಳುವ ಭಯಂಕರ ಜೀವಿಯಾಕಾರದ ಸಮುದ್ರ ಜಿರಳೆಯೊಂದು ಹಿಂದು ಮಹಾಸಾಗರದಲ್ಲಿ ಪತ್ತೆಯಾಗಿದೆ. ಇದು ಪೌರಾಣಿಕ ಸ್ಟಾರ್ ವಾರ್ ಡಾರ್ಟ್ ವಾಡೇರ್ ಪಾತ್ರವನ್ನು ನೆನಪಿಸುತ್ತದೆ.
ಸಿಂಗಾಪುರದ ಸಂಶೋಧಕರು ಪಶ್ಚಿಮ ಜಾವಾದ ಬೆನ್ ಟೇನ್ ತೀರದ ಸಮೀಪದ ಆಳ ಸಮುದ್ರದಲ್ಲಿ 14 ಕಾಲುಗಳ ಈ ಜಿರಳೆಯನ್ನು ಹುಡುಕಿದ್ದಾರೆ.
2018 ರಲ್ಲಿ ಮೊಟ್ಟ ಮೊದಲು ಇದು ಕಂಡುಬಂದಿತ್ತು. ಬಾತಿನೋಮಸ್ ರಾಕ್ಸಸಾ ಎಂದು ಹೆಸರಿಡಲಾಗಿತ್ತು. ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್) ಹಾಗೂ ನ್ಯಾಷನಲ್ ಯುನಿವರ್ಸಿಟಿ ಆಫ್ ಸಿಂಗಾಪುರ್ ಜಂಟಿಯಾಗಿ ಸಂಶೋಧನೆ ನಡೆಸಿದ್ದು, ಪೀಟರ್ ಎನ್ ಜಿ ನೇತೃತ್ವದ ಸಂಶೋಧಕರ ತಂಡ ಬೆನ್ ಟೇನ್ ತೀರದ ಸುತ್ತ 2 ವಾರ ಕಳೆದು 63 ಸ್ಥಳಗಳನ್ನು ಗುರುತಿಸಿತ್ತು. ಈ ತಂಡವು ಅತ್ಯಾಧುನಿಕ ಡ್ರಜ್ಜಿಂಗ್ ಡಿವೈಸ್ ಗಳ ಮೂಲಕ ಸಾವಿರಕ್ಕೂ ಅಧಿಕ ಸಮುದ್ರ ಜೀವಿಗಳನ್ನು ಸುಮಾರು 800 ಮೀಟರ್ ಸಮುದ್ರದಾಳದಿಂದ ಸಂಗ್ರಹಿಸಿದೆ. ಇನ್ನು ಕೆಲವನ್ನು 2100 ಮೀಟರ್ ನಿಂದ ಮೇಲೆತ್ತಲಾಗಿದೆ.
ಜೆಲ್ಲಿ ಫಿಶ್ ಗಳು, ಏಡಿಗಳು, ಸ್ಟಾರ್ ಫಿಶ್ ಸೇರಿ 800 ವಿವಿಧ ಪ್ರಭೇದಗಳ ಜಲಚರಗಳ ಮಾದರಿಯನ್ನು ಸಂಗ್ರಹಿಸಲಾಗಿದೆ. ಇನ್ನೂ ವಿಜ್ಞಾನ ಇತಿಹಾಸದಲ್ಲಿ ಗುರುತಿಸಿ ದಾಖಲಿಸದ 12 ಪ್ರಭೇದಗಳು ಸೇರಿವೆ ಎಂಬುದು ವಿಶೇಷ. ಬಾತಿನೋಮಸ್ ರಾಕ್ಸಸಾ ಬೃಹತ್ ಸಪ್ತಪದಿ. ಇದು ಜಿರಳೆಯಂತೆ ಕಂಡರೂ ಏಡಿ ಹಾಗೂ ಸೀಗಡಿ ವಂಶಕ್ಕೆ ಸೇರಿದ್ದಾಗಿದೆ.