ಅಕ್ರಮ ವಲಸೆಗಾರರು ಎಂಬ ಆರೋಪವನ್ನು ಹೊತ್ತು ಬರೋಬ್ಬರಿ ಒಂದು ವರ್ಷಗಳ ಕಾಲ ಬಂಧನದಲ್ಲಿದ್ದ ದಂಪತಿ ಹಾಗೂ ಮಕ್ಕಳಿಗೆ ಹೊಸ ವರ್ಷ ಶುಭ ತಂದಿದೆ. 34 ವರ್ಷದ ಮೊಹಮ್ಮದ್ ನೂರ್ ಹುಸೇನ್, ಪತ್ನಿ ಸಹೇರಾ ಬೇಗಂ (26) ಹಾಗೂ ಅವರ ಇಬ್ಬರು ಮಕ್ಕಳಿಗೆ ಬಿಡುಗಡೆ ಭಾಗ್ಯದ ಜೊತೆಗೆ ಭಾರತೀಯ ಪೌರತ್ವವೂ ಸಿಕ್ಕಿದೆ. ವಿದೇಶಿಯರ ನ್ಯಾಯಮಂಡಳಿ ಮರು ವಿಚಾರಣೆ ನಡೆಸಿ ಈ ನಿರ್ಧಾರ ಪ್ರಕಟಿಸಿದೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಹುಸೇನ್, ನಾವು ಹೆಮ್ಮೆಯ ಭಾರತೀಯರು. ನಾವು ಆಸ್ಸಾಂಗೆ ಸೇರಿದವರು. ನಮ್ಮನ್ನ ಬಾಂಗ್ಲಾದೇಶವರೆಂದು ತಪ್ಪಾಗಿ ಬಿಂಬಿಸಲಾಗಿತ್ತು. ನಾನು ಭಾರತದಲ್ಲೇ ಜನಿಸಿದ್ದೇನೆ ಎಂದ ಮೇಲೆ ಬಾಂಗ್ಲಾದವನಾಗಲು ಹೇಗೆ ಸಾಧ್ಯ..? ಎಂದು ಪ್ರಶ್ನೆ ಮಾಡಿದ್ರು. ಹುಸೇನ್ ಆಸ್ಸಾಂನ ಉದಲ್ಗುರಿ ಜಿಲ್ಲೆಯ ಲಾಡಾಂಗ್ ಗ್ರಾಮದವರಾಗಿದ್ದು ಗುವಾಹಟಿಯಲ್ಲಿ ರಿಕ್ಷಾ ಎಳೆಯುವ ಕೆಲಸ ಮಾಡ್ತಾರೆ.
1951ರ ಎನ್ಆರ್ಸಿ ಪಟ್ಟಿಯಲ್ಲಿ ಹುಸೇನ್ ಅಜ್ಜಿಯ ಹೆಸರು ಕಾಣಿಸಿಕೊಂಡ್ರೆ, 1965ರ ಮತದಾರರ ಪಟ್ಟಿಯಲ್ಲಿ ಅವರ ತಂದೆಯ ಹೆಸರು ಇದೆ. ಅಲ್ಲದೇ ಈ ಕುಟುಂಬ 1958-59ರ ಭೂ ದಾಖಲೆಗಳನ್ನ ಹೊಂದಿದೆ. ಆಸ್ಸಾಂನಲ್ಲಿ ಭಾರತೀಯರನ್ನ ಗುರುತಿಸಲು ಮಾರ್ಚ್ 24, 1971 ಕಟ್ ಆಫ್ ದಿನಾಂಕ ಎಂದು ಹೇಳಲಾಗಿದೆ.