
ನವದೆಹಲಿ: ದೀಪಾವಳಿ ಬಳಿಕ ದೆಹಲಿಯಲ್ಲಿ ವಾಯುಮಾಲಿನ್ಯ ಭಾರಿ ಹೆಚ್ಚಾಗಿದೆ. ಅಪಾಯಕಾರಿ ಮಟ್ಟವನ್ನು ಮಾಲಿನ್ಯಕಾರಕ ಕಣಗಳು ಮೀರಿವೆ. ದೆಹಲಿ ವಾಯು ಗುಣಮಟ್ಟ ಸೂಚ್ಯಂಕ 533 ಕ್ಕೆ ತಲುಪಿದೆ ಎಂದು ವಾಯು ಗುಣಮಟ್ಟ, ಹವಾಮಾನ ಮುನ್ಸೂಚನೆ ಮತ್ತು ಸಂಶೋಧನೆ ಕೇಂದ್ರ ಹೇಳಿದೆ.
ಭೂ ವಿಜ್ಞಾನ ಸಚಿವಾಲಯದ ವಾಯು ಗುಣಮಟ್ಟದ ಮುನ್ಸೂಚನೆ ಸಂಸ್ಥೆ SAFAR ಪ್ರಕಾರ, ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕ (AQI) ತನ್ನ ಏರುಮುಖ ಪ್ರವೃತ್ತಿಯನ್ನು ಮುಂದುವರೆಸಿದೆ. ದೀಪಾವಳಿ ಆಚರಣೆಯ ಎರಡು ದಿನಗಳ ನಂತರ, ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ಗಾಳಿಯ ಗುಣಮಟ್ಟ ತೀವ್ರ ಮಾಲಿನ್ಯದಿಂದ ಕೂಡಿದೆ.
ಶನಿವಾರ ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ದಟ್ಟವಾದ ಹೊಗೆ ಆವರಿಸಿದೆ, ಐದು ವರ್ಷಗಳಲ್ಲಿ ದೀಪಾವಳಿಯ ನಂತರದ ಗಾಳಿಯ ಗುಣಮಟ್ಟ ಅತ್ಯಂತ ಕೆಟ್ಟದಾಗಿದೆ ಎಂದು ವರದಿಗಳು ಹೇಳಿವೆ.
ಸುದ್ದಿಗಾರರೊಂದಿಗೆ ಮಾತನಾಡಿದ ದೆಹಲಿ ಪರಿಸರ ಸಚಿವ ಗೋಪಾಲ್ ರೈ ಅವರು, ದೀಪಾವಳಿಯಂದು ನಿಷೇಧದ ಹೊರತಾಗಿಯೂ ಕೆಲವರು ಉದ್ದೇಶಪೂರ್ವಕವಾಗಿ ಪಟಾಕಿ ಸಿಡಿಸಿದ್ದಾರೆ. ಇದರಿಂದ ದೆಹಲಿಯ ಗಾಳಿಯ ಗುಣಮಟ್ಟ ಹದಗೆಟ್ಟಿದೆ ಎಂದು ಹೇಳಿದ್ದಾರೆ.