alex Certify ವಂಚಕಿಯ ಬಂಧನಕ್ಕೆ ನೆರವಾಯ್ತು ಕೋವಿಡ್‌ ಲಸಿಕೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಂಚಕಿಯ ಬಂಧನಕ್ಕೆ ನೆರವಾಯ್ತು ಕೋವಿಡ್‌ ಲಸಿಕೆ….!

ಚೆನ್ನೈ: ಕೋವಿಡ್-19 ವ್ಯಾಕ್ಸಿನೇಷನ್ ಡೇಟಾ ಸಹಾಯದಿಂದ ಚಿಟ್ ಫಂಡ್ ವಂಚನೆಯಲ್ಲಿ ಭಾಗಿಯಾಗಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

ಎರಡು ವರ್ಷಗಳ ನಂತರ ಮಹಿಳೆಯೊಬ್ಬರು ಚಿಟ್ ಫಂಡ್ ಸ್ಕೀಮ್ ಬಳಸಿ ವಂಚಿಸಿದ ಆರೋಪದ ಮೇಲೆ ಪ್ರಕರಣ ದಾಖಲಾಗಿದ್ದು, ಆಕೆ ಕೋವಿಡ್-19 ಲಸಿಕೆಗೆ ನೀಡಿದ ವಿವರಗಳಿಂದಾಗಿ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಎಸ್. ಶಶಿಕಲಾ (48) ಎಂದು ಗುರುತಿಸಲಾಗಿದೆ. ಈಕೆ 50 ಲಕ್ಷ ರೂ. ಚಿಟ್ ಫಂಡ್ ವಂಚನೆಯಲ್ಲಿ ಭಾಗಿಯಾಗಿದ್ದಳು.

2019 ರಲ್ಲಿ, ಚೆನ್ನೈನ ಕೊಡುಂಗೈಯೂರ್ ನೆರೆಹೊರೆಯ ನಿವಾಸಿ ಎಸ್. ಪ್ರೇಮಾ ಮತ್ತು ಇತರ ಠೇವಣಿದಾರರು ನೀಡಿದ ದೂರಿನನ್ವಯ, ಶಶಿಕಲಾ ಮತ್ತು ಈಕೆಯ ಸಂಬಂಧಿ ಈಶ್ವರಿ ವಿರುದ್ಧ ವಂಚನೆ ಪ್ರಕರಣ ದಾಖಲಾಗಿತ್ತು. ಈಶ್ವರಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ಶಶಿಕಲಾ ತಲೆಮರೆಸಿಕೊಂಡಿದ್ದಳು.

ವರದಿಯ ಪ್ರಕಾರ, ಶಶಿಕಲಾ ಕಾಂಚೀಪುರಂಗೆ ಬಂದಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಆಕೆಯ ಪತಿಯನ್ನು ಸುರೇಶ್‌ಬಾಬು ಎಂದು ಗುರುತಿಸಲಾಗಿದ್ದು, ಕೆಲಸ ಕಳೆದುಕೊಂಡು ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ. ಈಕೆ ಮೊಬೈಲ್ ಉಪಯೋಗಿಸುತ್ತಿರಲಿಲ್ಲವಾದ್ದರಿಂದ ಈಕೆಯ ಪತ್ತೆ ಕಾರ್ಯ ಪೊಲೀಸರಿಗೆ ಅಷ್ಟು ಸುಲಭದ್ದಾಗಿರಲಿಲ್ಲ.

ಅಂತಿಮವಾಗಿ, ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಆಕೆಯ ಆಧಾರ್ ಕಾರ್ಡ್ ಬಳಸಿ ಶಶಿಕಲಾ ಕೋವಿಡ್-19 ಲಸಿಕೆ ತೆಗೆದುಕೊಂಡಿದ್ದಾಳೆಯೇ ಎಂಬುದನ್ನು ಪರಿಶೀಲಿಸಿದ್ದಾರೆ. ಈ ವೇಳೆ ಆಕೆ ಕಾಂಚೀಪುರಂನ ಸರ್ಕಾರಿ ಶಾಲೆಯೊಂದರಲ್ಲಿ ಲಸಿಕೆ ಹಾಕಿಸಿಕೊಂಡಿದ್ದಾಳೆ ಎಂಬುದು ಗೊತ್ತಾಗಿದೆ. ಕೇಬಲ್ ಟಿವಿ ಕಾರ್ಯಾಚರಣೆಯಿಂದ ಸುಳಿವು ಪಡೆದ ಪೊಲೀಸರು ಶಶಿಕಲಾಳನ್ನು  ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...