ಬೆಂಗಳೂರು : ರಾಜ್ಯದ ಹೋಟೆಲ್, ಉಪಹಾರ ಕೇಂದ್ರಗಳಲ್ಲಿ ಇನ್ಮುಂದೆ ಪ್ಲಾಸ್ಟಿಕ್ ನಿಷೇಧ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಸದ್ಯ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮೌಖಿಕ ಆದೇಶ ಹೊರಡಿಸಿದ್ದು, 2 ದಿನದಲ್ಲಿ ಅಧಿಕೃತ ಆದೇಶ ಹೊರಡಿಸುವುದಾಗಿ ಅವರು ಹೇಳಿದ್ದಾರೆ. ರಾಜ್ಯದ ಹೋಟೆಲ್, ಉಪಹಾರ ಕೇಂದ್ರಗಳಲ್ಲಿ ಇನ್ಮುಂದೆ ಪ್ಲಾಸ್ಟಿಕ್ ಬಳಸುವ ಹಾಗಿಲ್ಲ ಎಂದು ಅವರು ಖಡಕ್ ಸೂಚನೆ ನೀಡಿದ್ದಾರೆ.
ಬೆಂಗಳೂರಿನ ಹಲವು ಕಡೆ ಇಡ್ಲಿ ತಯಾರಿಕೆಯಲ್ಲಿ ಹತ್ತಿ ಬಟ್ಟೆಯ ಬದಲು ಪ್ಲಾಸ್ಟಿಕ್ ಕವರ್ ಬಳಸುತ್ತಿದ್ದಾರೆ. ಇಡ್ಲಿ ಮಾಡುವಾಗ ಮಾತ್ರವಲ್ಲದೇ , ಆಹಾರ ಬಡಿಸುವಾಗ ಮತ್ತು ಪ್ಯಾಕ್ ಮಾಡಿ ಕೊಡಲು ಕೂಡ ಪ್ಲಾಸ್ಟಿಕ್ ಬಳಕೆ ಮಾಡಲಾಗುತ್ತಿದೆ. ಪ್ಲಾಸ್ಟಿಕ್ ಹೆಚ್ಚಾಗಿ ಬಳಸುವುದರಿಂ ಅವುಗಳು ಬಿಸಿಲಿನ ಶಾಖಕ್ಕೆ ಒಡ್ಡಿಕೊಂಡಾಗ ಕ್ಯಾನ್ಸರ್ ಕಾರಕ ಅಂಶಗಳನ್ನು ಹೊರಸೂಸುತ್ತದೆ ಎಂದು ವರದಿಯೊಂದು ಹೇಳಿದೆ.
ಬೆಂಗಳೂರಿನ ಹಲವು ಇಡ್ಲಿ ತಯಾರಿಕಾ ಘಟಕ ಹಾಗೂ ಅಂಗಡಿಗಳ ಮೇಲೆ ಆಹಾರ ಇಲಾಖೆ ದಾಳಿ ನಡೆಸಿತ್ತು. ಈ ವೇಳೆ ಸುಮಾರು 500 ಇಡ್ಲಿ ಸ್ಯಾಂಪಲ್ ಸಂಗ್ರಹಿಸಲಾಗಿತ್ತು, ಅದನ್ನು ಪರೀಕ್ಷೆಗೆ ಕಳುಹಿಸಿದಾಗ 35 ಕ್ಕೂ ಹೆಚ್ಚು ಇಡ್ಲಿಗಳು ಅತ್ಯಂತ ಅಪಾಯಕಾರಿ ಎಂದು ತಿಳಿದು ಬಂದಿದೆ.