alex Certify ಕೊರೋನಾ ಕಂಟ್ರೋಲ್ ಗೆ ಮತ್ತೊಂದು ಕ್ರಮ: ಮದುವೆಗೆ 50 ಜನ ಮಾತ್ರ ಭಾಗವಹಿಸಿರುವುದನ್ನು ಗುರುತಿಸಲು ಕೈಗೆ ಬ್ಯಾಂಡ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೋನಾ ಕಂಟ್ರೋಲ್ ಗೆ ಮತ್ತೊಂದು ಕ್ರಮ: ಮದುವೆಗೆ 50 ಜನ ಮಾತ್ರ ಭಾಗವಹಿಸಿರುವುದನ್ನು ಗುರುತಿಸಲು ಕೈಗೆ ಬ್ಯಾಂಡ್

ಧಾರವಾಡ: ರಾಜ್ಯಸರ್ಕಾರವು ಏಪ್ರೀಲ್ 21 ರಿಂದ ಜಾರಿಗೊಳಿಸಿದ ಹೊಸ ಮಾರ್ಗಸೂಚಿಗಳ ಪ್ರಕಾರ ಮದುವೆಗಳಲ್ಲಿ 50 ಜನರಿಗೆ ಮಾತ್ರ ಭಾಗವಹಿಸಲು ಅವಕಾಶ ನೀಡಲಾಗಿದ್ದು, ಧಾರವಾಡ ಜಿಲ್ಲಾಡಳಿತವು ಈ ನಿಯಮ ಪಾಲನೆ ಹಾಗೂ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ವಿಶೇಷ ಕ್ರಮ ಜರುಗಿಸಿದೆ. ಮದುವೆಗಳಲ್ಲಿ ಭಾಗವಹಿಸುವ 50 ಜನರಿಗೆ, ತಮ್ಮ ಕೈಗಳಿಗೆ ಧರಿಸಲು ವಿಶೇಷವಾದ ಬ್ಯಾಂಡ್‍ಗಳನ್ನು ಮದುವೆ ಆಯೋಜಕರಿಗೆ ಅನುಮತಿಯೊಂದಿಗೆ ಬ್ಯಾಂಡ್ ನೀಡಲು ಕ್ರಮವಹಿಸಿದೆ.

ಈ ಕುರಿತು ಪ್ರಕಟಣೆ ನೀಡಿರುವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಮಹಾನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಮೇ.4ರವರೆಗೆ ಜರುಗುವ ಮದುವೆಗಳಿಗೆ ಅನುಮತಿ ಪಡೆಯುವುದನ್ನು ಜಿಲ್ಲೆಯಲ್ಲಿ ಕಡ್ಡಾಯಗೊಳಿಸಲಾಗಿದೆ. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಲಯ ಸಹಾಯಕ ಆಯುಕ್ತರು ಹಾಗೂ ಗ್ರಾಮೀಣ ಪ್ರದೇಶ ಸೇರಿದಂತೆ ಉಳಿದ ಎಲ್ಲ ತಾಲೂಕು ವ್ಯಾಪ್ತಿಯಲ್ಲಿ ತಹಶೀಲ್ದಾರರು ಮದುವೆಗಳ ಆಯೋಜನೆಗೆ ಅನುಮತಿ ನೀಡಲು ಆದೇಶಿಸಲಾಗಿದೆ.

ಮದುವೆಗಳಲ್ಲಿ ನಿಯಮ ಮೀರಿ 50 ಕ್ಕಿಂತ ಹೆಚ್ಚು ಜನ ಪಾಲ್ಗೊಳ್ಳದಂತೆ ಜಾಗೃತಿ ವಹಿಸಲು ಹಾಗೂ ಆಯೋಜಕರಿಗೆ ಸಂಖ್ಯಾ ನೀತಿಯನ್ನು ಖಾತರಿಪಡಿಸಿಕೊಳ್ಳಲು ಅನುಕೂಲವಾಗುವಂತೆ ಅನುಮತಿ ಪಡೆಯಲು ಬರುವ ಆಯೋಜಕರಿಗೆ ಅನುಮತಿಯೊಂದಿಗೆ ಅನುಕ್ರಮ ಸಂಖ್ಯೆ ಇರುವ 50 ವಿಶೇಷವಾದ ಬ್ಯಾಂಡ್‍ಗಳನ್ನು ನೀಡಲು ಕ್ರಮ ಕೈಗೊಳ್ಳಲಾಗಿದೆ.

ಈ ಬ್ಯಾಂಡ್‍ಗಳು ಜಲನಿರೋಧಕವಾಗಿದ್ದು (ವಾಟರ್‍ಪ್ರೂಫ್), ಕೈಗಳಿಗೆ ಧರಿಸಿದಾಗ ಮಡಿಕೆ ಬೀಳದೆ ಇರುವಂತೆ ಹಾಗೂ ಒಬ್ಬ ವ್ಯಕ್ತಿ ಒಂದುಸಲ ಧರಿಸಿದರೆ ಅದನ್ನು ತೆಗೆದು ಮರುಬಳಕೆ ಮಾಡಲು ಅಥವಾ ಮತ್ತೊಬ್ಬರಿಗೆ ಬ್ಯಾಂಡ್ ವರ್ಗಾಯಿಸಲು ಬರುವುದಿಲ್ಲ. ಒಂದುವೇಳೆ ವರ್ಗಾಯಿಸಲು ಪ್ರಯತ್ನಿಸಿದರೆ ಅದು ತುಂಡಾಗುತ್ತದೆ. ಇದರಿಂದ ಕೇವಲ 50 ಜನ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದನ್ನು ನಿಗಾವಹಿಸಲು ಸಾಧ್ಯವಾಗುತ್ತದೆ. ಮತ್ತು ಈ ಬ್ಯಾಂಡ್ ಧರಿಸಿದ ಮದುವೆಯು ಅನುಮತಿ ಪಡೆದಿರುವುದನ್ನು ಗುರುತಿಸುತ್ತದೆ.

ಸರ್ಕಾರವು ಹೊರಡಿಸಿರುವ ಮಾರ್ಗಸೂಚಿಗಳನ್ನು ಪ್ರತಿ ಹಂತದಲ್ಲೂ ಪ್ರತಿಯೊಬ್ಬರು ಕಡ್ಡಾಯವಾಗಿ ಪಾಲಿಸುವಂತೆ ಜಿಲ್ಲಾಡಳಿತ ವಿವಿಧ ರೀತಿಯ ಜನಜಾಗೃತಿ ಕ್ರಮಗಳನ್ನು ಕೈಗೊಳ್ಳುತ್ತಿದೆ. ಮದುವೆ ಆಯೋಜಕರು, ಸಾರ್ವಜನಿಕರು ಸಹಕಾರ ನೀಡಿ, ಜಿಲ್ಲಾಡಳಿತದ ಕ್ರಮಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಬೇಕು.

ಜಿಲ್ಲೆಯ ಯಾವುದೇ ಒಳಾಂಗಣ ಸಭಾಂಗಣಗಳು ಅಥವಾ ತೆರೆದ ಪ್ರದೇಶಗಳಲ್ಲಿ ನಡೆಯುವ ಮದುವೆಗಳಲ್ಲಿ 50 ಜನರಿಗೆ ಮಾತ್ರ ಭಾಗವಹಿಸಲು ಅವಕಾಶ ನೀಡಲಾಗಿದೆ. ಈ ನಿಯಮ ಪಾಲನೆಯ ಕುರಿತು ನಿರಂತರ ಪರಿಶೀಲನೆ ನಡೆಯುತ್ತಿರುತ್ತದೆ. ಯಾರಾದರೂ ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ತಮ್ಮ ಸುತ್ತಲಿನ ಪ್ರದೇಶಗಳಲ್ಲಿ ಇಂತಹ ಮದುವೆ ಸಮಾರಂಭಗಳು ಕಂಡು ಬಂದರೆ ಕಂದಾಯ, ಪೊಲೀಸ್ ಅಥವಾ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಸಾರ್ವಜನಿಕರು ಮಾಹಿತಿ ನೀಡಬೇಕು. ಮದುವೆ ಆಯೋಜಕರಿಗೆ ಹಾಗೂ ಕಲ್ಯಾಣ ಮಂಟಪ, ಸಮುದಾಯ ಭವನಗಳ ನಿರ್ವಾಹಕರಿಗೆ ಅನುಮತಿಸಲಾದ ಸಂಖ್ಯೆಯ ಮಿತಿಯನ್ನು ದಾಟದಂತೆ ಎಚ್ಚರಿಕೆ ವಹಿಸಲು ಧಾರವಾಡ ಜಿಲ್ಲಾಡಳಿತದಿಂದ ಈ ನೂತನ ಬ್ಯಾಂಡ್ ಧರಿಸುವ ಕ್ರಮವನ್ನು ಜಾರಿಗೊಳಿಸಿದೆ. ಇದಕ್ಕೆ ತಪ್ಪಿದಲ್ಲಿ ಮತ್ತು ಮಾರ್ಗಸೂಚಿಯಲ್ಲಿ ತಿಳಿಸಿರುವ ಸಂಖ್ಯೆಗಿಂತ ಹೆಚ್ಚು ಜನ ಭಾಗವಹಿಸಿರುವುದು ಕಂಡುಬಂದಲ್ಲಿ ಮದುವೆ ಆಯೋಜಕರ ಹಾಗೂ ಮದುವೆ ಮಂಟಪದ ಮಾಲೀಕರ ಮೇಲೆ ಎಫ್‍ಐಆರ್ ದಾಖಲಿಸಿ, ತಕ್ಷಣ ಕಲ್ಯಾಣ ಮಂಟಪ ಸೀಜ್ ಮಾಡಲಾಗುವುದೆಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...