ದೇಹ ತೂಕ ಇಳಿಸಿಕೊಳ್ಳಲು ಹಲವು ಪ್ರಯತ್ನಗಳನ್ನು ಮಾಡಿ ಸೋತಿದ್ದೀರಾ? ಸಕ್ಕರೆಯನ್ನು ನಿಮ್ಮ ಶತ್ರುವಿನಂತೆ ನೋಡಿ. ಅಗ ನಿಮ್ಮ ಗುರಿಯನ್ನು ತಲುಪಲು ಸುಲಭವಾಗುತ್ತದೆ.
ಸಕ್ಕರೆ ಕೇವಲ ಚಹಾ ಕಾಫಿಗೆ ಮಾತ್ರ ಬಳಕೆಯಾಗುವುದು ಎಂದುಕೊಳ್ಳಬೇಡಿ, ಪ್ಯಾಕ್ ಮಾಡಿದ ಎಲ್ಲಾ ಆಹಾರಗಳಿಗೂ ಸಕ್ಕರೆ ಬಳಸಿರುತ್ತಾರೆ ಎಂಬುದನ್ನು ನೆನಪಿಟ್ಟುಕೊಳ್ಳಿ. ತೂಕ ಇಳಿಸಿಕೊಳ್ಳಬೇಕಾದರೆ ನೀವು ಸೇವಿಸುವ ಕ್ಯಾಲೊರಿಗಳ ಸಂಖ್ಯೆಯೂ ಇಳಿಯಬೇಕು. ಸಾಮಾನ್ಯವಾಗಿ ಒಂದು ಲೋಟ ಚಹಾಗೆ ಬಳಸುವ ಒಂದು ಚಮಚ ಸಕ್ಕರೆಯಲ್ಲಿ 16 ಕ್ಯಾಲೊರಿಗಳಿರುತ್ತವೆ.
ಅತಿಯಾದ ಸಕ್ಕರೆ ಸೇವನೆಯಿಂದ ಬೊಜ್ಜು ಹೆಚ್ಚುತ್ತದೆ, ಹೃದ್ರೋಗ, ಮಧುಮೇಹ, ಅಧಿಕ ರಕ್ತದೊತ್ತಡ, ಕೊಲೆಸ್ಟ್ರಾಲ್ ಮತ್ತಿತರ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹಲ್ಲುಗಳೂ ಬಹುಬೇಗ ಹುಳುಕಾಗುತ್ತವೆ.
ನಿತ್ಯ ಸಕ್ಕರೆ ಸೇವಿಸುವುದನ್ನು ಕಡಿಮೆ ಮಾಡುವುದರಿಂದ ಹಲವು ರೋಗಗಳಿಂದ ದೂರ ಉಳಿಯಬಹುದು. ಸಕ್ಕರೆ ಬಳಸಿದ ಉತ್ಪನ್ನ ಖರೀದಿಸುವುದು ಅನಿವಾರ್ಯವಾದರೆ ಅದರ ಲೇಬಲ್ ಗಳನ್ನು ಪರೀಕ್ಷಿಸುವ ಅಭ್ಯಾಸ ಇಟ್ಟುಕೊಳ್ಳಿ. ಕೆಚಪ್, ಸಂಸ್ಕರಿಸಿದ ಆಹಾರ, ಸಾಸ್ ಮತ್ತು ಕೋಲಾಗಳಲ್ಲಿ ಹೆಚ್ಚಿನ ಸಕ್ಕರೆ ಅಂಶ ಇರುತ್ತದೆ. ಇವುಗಳನ್ನು ಅನಿವಾರ್ಯ ಎನಿಸಿದಾಗ ಮಾತ್ರ ಖರೀದಿಸಿ. ಹಣ್ಣುಗಳಲ್ಲಿರುವ ಸಕ್ಕರೆ ನೈಸರ್ಗಿಕ ರೂಪದಲ್ಲಿ ಇರುವುದರಿಂದ ಇದು ನಮ್ಮ ದೇಹಕ್ಕೆ ಅತ್ಯಗತ್ಯವಾಗಿರುತ್ತದೆ.