alex Certify ರೋಗಿ ಸಾವನ್ನಪ್ಪಿದ ವೇಳೆ ವೈದ್ಯರನ್ನು ಹೊಣೆಗಾರರನ್ನಾಗಿಸಲು ಸಾಧ್ಯವಿಲ್ಲ: ಸುಪ್ರೀಂ ಮಹತ್ವದ ಆದೇಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೋಗಿ ಸಾವನ್ನಪ್ಪಿದ ವೇಳೆ ವೈದ್ಯರನ್ನು ಹೊಣೆಗಾರರನ್ನಾಗಿಸಲು ಸಾಧ್ಯವಿಲ್ಲ: ಸುಪ್ರೀಂ ಮಹತ್ವದ ಆದೇಶ

ಆಸ್ಪತ್ರೆಯಲ್ಲಿ ರೋಗಿ ಸಾವನ್ನಪ್ಪಿದ ವೇಳೆ ಇದಕ್ಕೆ ವೈದ್ಯರ ನಿರ್ಲಕ್ಷ್ಯ ಕಾರಣವೆಂದು ಅವರನ್ನು ಹೊಣೆಗಾರರನ್ನಾಗಿಸಲು ಸಾಧ್ಯವಿಲ್ಲ. ಯಾವುದೇ ವೈದ್ಯರಾದರೂ ರೋಗಿಗಳನ್ನು ಉಳಿಸಲು ತಮ್ಮ ಕೈಲಾದ ಮಟ್ಟಿಗೆ ಯತ್ತಿಸುತ್ತಾರೆ. ಆದಾಗ್ಯೂ ರೋಗಿ ಸಾವನ್ನಪ್ಪಿದರೆ ಇದಕ್ಕೆ ವೈದ್ಯರು ಕಾರಣರೆಂದು ಆರೋಪಿಸುವುದು ತರವಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ವೇಳೆ ಸಮೀಪದ ಬಂಧುಗಳಿಗೆ ನೋವಾಗುವುದು ಸಹಜ. ಅಂತಹ ಸಂದರ್ಭಗಳಲ್ಲಿ ಭಾವೋದ್ವೇಗಕ್ಕೊಳಗಾಗಿ ಇದಕ್ಕೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಆರೋಪಿಸುವ ಪ್ರವೃತ್ತಿ ಹೆಚ್ಚಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ ನ್ಯಾಯಪೀಠ, ವೈದ್ಯ ಸಮೂಹದ ನಿಸ್ವಾರ್ಥದ ಸೇವೆ ಕೊರೊನಾದಂತಹ ʼಪಾಂಡಮಿಕ್‌ʼ ಸಂದರ್ಭದಲ್ಲಿ ಎಲ್ಲರಿಗೂ ಮನದಟ್ಟಾಗಿದೆ ಎಂದು ಹೇಳಿದೆ.

ಪ್ರಕರಣವೊಂದರಲ್ಲಿ ಮೃತ ರೋಗಿಯ ಕುಟುಂಬಸ್ಥರಿಗೆ 14.18 ಲಕ್ಷ ರೂಪಾಯಿಗಳನ್ನು ಪರಿಹಾರವಾಗಿ ನೀಡುವಂತೆ ರಾಷ್ಟ್ರೀಯ ಗ್ರಾಹಕರ ವೇದಿಕೆ‌ ಆಯೋಗವು ಮುಂಬೈನ ಬಾಂಬೆ ಹಾಸ್ಪೆಟಲ್‌ ಅಂಡ್‌ ಮೆಡಿಕಲ್‌ ರೀಸರ್ಚ್‌ ಸೆಂಟರ್‌ ಗೆ 2010 ರಲ್ಲಿ ನೀಡಿದ ಆದೇಶ ಪ್ರಶ್ನಿಸಿ ಆಸ್ಪತ್ರೆ ಆಡಳಿತ ಮಂಡಳಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಹೇಮಂತ್‌ ಗುಪ್ತಾ ಮತ್ತು ವಿ. ಸುಬ್ರಮಣಿಯನ್ ಅವರುಗಳಿದ್ದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಗ್ಯಾಂಗ್ರೀನ್‌ ಗೆ ತುತ್ತಾಗಿದ್ದ ದಿನೇಶ್‌ ಜೈಸ್ವಾಲ್‌ ಎಂಬವರು ಬಾಂಬೆ ಹಾಸ್ಪೆಟಲ್‌ ಗೆ ದಾಖಲಾಗಿದ್ದು, ಅವರ ಕಾಲಿಗೆ ಶಸ್ತ್ರ ಚಿಕಿತ್ಸೆ ನಡೆಸಲಾಗಿತ್ತು. ಆದರೆ ಆ ಬಳಿಕ ದಿನೇಶ್‌ ಜೈಸ್ವಾಲ್‌ ಸಾವನ್ನಪ್ಪಿದ್ದರು. ಇದಕ್ಕೆ ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ. ಅಲ್ಲದೇ ಶಸ್ತ್ರ ಚಿಕಿತ್ಸೆ ಸಂದರ್ಭದಲ್ಲಿ ತಜ್ಞ ವೈದ್ಯರು ಇರಲಿಲ್ಲ. ರೋಗಿಯ ಪರಿಸ್ಥಿತಿ ಗಂಭೀರವಾದಾಗಲೂ ವೈದ್ಯರು ಹಾಜರಿರಲಿಲ್ಲ ಎಂದು ಆರೋಪಿಸಿದ್ದ ಕುಟುಂಬಸ್ಥರು ಪರಿಹಾರ ಕೋರಿ ಗ್ರಾಹಕ ಆಯೋಗದ ಮೊರೆ ಹೋಗಿದ್ದರು.

ಪ್ರಕರಣದ ವಿಚಾರಣೆ ನಡೆಸಿದ್ದ ಗ್ರಾಹಕ ಆಯೋಗ ಪರಿಹಾರ ನೀಡುವಂತೆ ಆದೇಶಿಸಿತ್ತು. ಆದರೆ ಇದನ್ನು ಪ್ರಶ್ನಿಸಿ ಆಸ್ಪತ್ರೆ ಆಡಳಿತ ಮಂಡಳಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದು, ಇದೀಗ ಗ್ರಾಹಕ ಆಯೋಗದ ಆದೇಶ ರದ್ದುಗೊಳಿಸಲಾಗಿದೆ.

ರೋಗಿ ಆಸ್ಪತ್ರೆಗೆ ದಾಖಲಾಗುವ ಮುನ್ನವೇ ಗಂಭೀರ ಸ್ಥಿತಿಯಲ್ಲಿದ್ದರು ಎಂಬ ಅಂಶವನ್ನು ಪರಿಗಣಿಸಿರುವ ನ್ಯಾಯಾಲಯ ಅಲ್ಲದೇ ತಜ್ಞ ವೈದ್ಯರು ಲಭ್ಯವಿರಲಿಲ್ಲ ಎಂಬ ಕುಟುಂಬಸ್ಥರ ಆರೋಪವನ್ನು ತಳ್ಳಿಹಾಕಿದೆ. ಅಂದು ಹಾಜರಿದ್ದ ವೈದ್ಯರು ರೋಗಿಯನ್ನು ಉಳಿಸಲು ಸಾಕಷ್ಟು ಪ್ರಯತ್ನಪಟ್ಟಿದ್ದಾರೆ. ಆದರೂ ಸಾಧ್ಯವಾಗಿಲ್ಲ. ಅಂತಿಮವಾಗಿ ಪ್ರಕೃತಿಯೇ ಅಂತಿಮ ಉತ್ತರ ಎಂದ ನ್ಯಾಯಪೀಠ, ರೋಗಿಗಳ ಪಕ್ಕದಲ್ಲಿ ವೈದ್ಯರು 24 ಗಂಟೆಗಳ ಕಾಲ ಹಾಜರಿರರಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...