ರಾಜ್ಯದ ಹಲವು ಭಾಗಗಳಲ್ಲಿ ಕಳೆದ ಕೆಲವು ದಿನಗಳಿಂದ ಮಳೆರಾಯ ಆರ್ಭಟಿಸುತ್ತಿದ್ದ ಕಾರಣ ಜನ ತತ್ತರಿಸಿ ಹೋಗಿದ್ದರು. ನಿರಂತರವಾಗಿ ಸುರಿದ ಮಳೆಯ ಕಾರಣಕ್ಕೆ ಬೆಳೆ ನಷ್ಟವಾಗುವುದರ ಜೊತೆಗೆ ಆಸ್ತಿಪಾಸ್ತಿ ಹಾಗೂ ಜೀವ ಹಾನಿಯೂ ಸಂಭವಿಸಿತ್ತು.
ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸುರಿದ ಮಳೆ ಜನ ಜೀವನವನ್ನು ಸಂಪೂರ್ಣವಾಗಿ ಅಸ್ತವ್ಯಸ್ತ ಮಾಡಿದ್ದು, ಇನ್ನಿಲ್ಲದಂತೆ ಪರದಾಡುವಂತಾಗಿತ್ತು. ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಜನತೆ ವಾಸ ಸ್ಥಳವನ್ನು ತೊರೆಯುವಂತಾಗಿತ್ತಲ್ಲದೆ ರಸ್ತೆಗಳಲ್ಲಿ ಮೊಣಕಾಲುದ್ದ ನೀರಿದ್ದ ಕಾರಣ ಸಂಚಾರ ಮಾಡುವುದು ದುಸ್ತರವಾಗಿತ್ತು.
ಇದೀಗ ಮಳೆ ಆತಂಕದಲ್ಲಿದ್ದ ಜನತೆಗೆ ಹವಾಮಾನ ಇಲಾಖೆ ಶುಭ ಸುದ್ದಿಯೊಂದನ್ನು ನೀಡಿದೆ. ಇಂದಿನಿಂದ ಮಳೆ ಅಬ್ಬರ ತಗ್ಗಲಿದ್ದು, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಭಾನುವಾರ ಮತ್ತು ಸೋಮವಾರ ಸಾಧಾರಣ ಮಳೆಯಾಗಲಿದೆ ಎಂದು ತಿಳಿಸಲಾಗಿದೆ. ಇನ್ನು ಶಿವಮೊಗ್ಗ, ಹಾಸನ, ಕೊಡಗು, ಚಿಕ್ಕಮಗಳೂರು, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಕಲಬುರಗಿ ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್ ಘೋಷಿಸಲಾಗಿದೆ.