
ರಾಂಚಿ: ಗ್ರಾಮ ಪಂಚಾಯತ್ ಚುನಾವಣೆಗೆ ನಾಮಪತ್ರ ಸಲ್ಲಿಸುವ ವೇಳೆ ನಡೆದ ರಾಲಿಯಲ್ಲಿ ಪಾಕ್ ಪರ ಘೋಷಣೆ ಕೂಗಿದ್ದು, ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಜಾರ್ಖಂಡ್ ರಾಜ್ಯದ ಗಿರಿಧಿ ಜಿಲ್ಲೆಯಲ್ಲಿ ಪಂಚಾಯತ್ ಚುನಾವಣೆಗಳಿಗೆ ನಾಮಪತ್ರ ಸಲ್ಲಿಸುವ ವೇಳೆ ಈ ಘಟನೆ ನಡೆದಿದೆ. ‘ಪಾಕಿಸ್ತಾನ್ ಜಿಂದಾಬಾದ್’ ಎಂಬ ಘೋಷಣೆ ಕೂಗಿದ ಆರೋಪದಲ್ಲಿ ಮುಖ್ಯಸ್ಥನ ಹುದ್ದೆಗೆ ಸ್ಪರ್ಧಿಸಿರುವ ಮೊಹಮ್ಮದ್ ಶಾಕಿರ್ ಹುಸೇನ್ ಹಾಗೂ ಬೆಂಬಲಿಗರನ್ನು ಪೊಲೀಸರು ದಸ್ತಗಿರಿ ಮಾಡಿದ್ದಾರೆ. ಗಂಡೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ವರದಿಯಾಗಿದೆ.
ಶಾಕಿರ್ ಹುಸೇನ್ ನಾಮಪತ್ರ ಸಲ್ಲಿಸುವ ಮುನ್ನ ರೋಡ್ ಶೋ ನಡೆಸಿದ್ದರು. ತಾಲೂಕು ಕಚೇರಿ ದ್ವಾರದ ಬಳಿ ಈತನ ಬೆಂಬಲಿಗರು ಘೋಷಣೆಗಳನ್ನು ಕೂಗುತ್ತಿರುವ ವೀಡಿಯೋ ಲಭ್ಯವಾಗಿದೆ.
ಮುಖಿಯಾ ಸ್ಥಾನದ ಅಭ್ಯರ್ಥಿ ಹಾಗೂ ಆತನ ಬೆಂಬಲಿಗರನ್ನು ಬಂಧಿಸಿದ್ದೇವೆ. ಅವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು, ಈ ಘಟನೆಯ ಕುರಿತು ವಿಸ್ತೃತ ತನಿಖೆ ನಡೆಸುವುದಾಗಿಯೂ ಗಿರಿಧಿ ಉಪ ವಿಭಾಗದ ಪೊಲೀಸ್ ಅಧಿಕಾರಿ (ಎಸ್‌ಡಿಪಿಒ) ಅನಿಲ್ ಕುಮಾರ್ ತಿಳಿಸಿದ್ದಾರೆ.