ಸೀಗೆಕಾಯಿ ಅನಾದಿಕಾಲದಿಂದಲೂ ಕೇಶ ಹಾಗೂ ನೆತ್ತಿಯ ಆರೈಕೆಗಾಗಿ ಬಳಕೆಯಾಗುತ್ತಿರುವ ಗಿಡಮೂಲಿಕೆ ಯಾಗಿದೆ. ಸೀಗೆಕಾಯಿ ತಲೆಕೂದಲನ್ನು ಶುದ್ಧೀಕರಿಸುವ ಒಂದು ಅತ್ಯುತ್ತಮ ಸಾಧನವಾಗಿದೆ. ಅಲ್ಲದೆ ಕೈಗೆಟಕುವ ಬೆಲೆಯಲ್ಲಿ ಎಲ್ಲಾ ಅಂಗಡಿಗಳಲ್ಲಿ ದೊರೆಯುವ ಸೀಗೆಕಾಯಿಯನ್ನು ಯಾರು ಬೇಕಾದರೂ ನಿಶ್ಚಿಂತೆಯಿಂದ ಬಳಸಬಹುದು. ಕೂದಲಿಗೆ ಇದು ಹೇಗೆ ಪೋಷಣೆ ಮಾಡುತ್ತದೆ ಎಂಬುದನ್ನು ನೀವೂ ತಿಳಿದುಕೊಳ್ಳಿ.
* ಕೂದಲ ಆರೈಕೆಯ ಜೊತೆಗೆ ಇತರೆ ರಾಸಾಯನಿಕಗಳ ಬಳಕೆಯಿಂದ ಉಂಟಾದ ನೆತ್ತಿಯ ಚರ್ಮದ ವ್ಯಾಧಿಗಳಿಗೆ ಸೀಗೆಕಾಯಿ ಮುಕ್ತಿ ನೀಡುತ್ತದೆ.
* ಸೀಗೆಕಾಯಿಯಲ್ಲಿ ಅತಿ ಕಡಿಮೆ ಮಟ್ಟದ ಆಮ್ಲೀಯತೆ ಇರುವುದರಿಂದ ಸೂಕ್ಷ್ಮ ಚರ್ಮಿಯರಿಗೆ ಇದು ಬಹಳಷ್ಟು ಸಹಕಾರಿಯಾಗಿದೆ.
* ಕೂದಲನ್ನು ಸೂಕ್ಷ್ಮವಾಗಿಸುವುದರ ಜೊತೆಗೆ ಸದೃಢವನ್ನಾಗಿಸುತ್ತದೆ.
* ಕೂದಲು ಉದುರುವಿಕೆಯನ್ನು ನಿವಾರಿಸಲು ಸೀಗೆಕಾಯಿಗಿಂತ ಉತ್ತಮ ಬಳಕೆ ಮತ್ತೊಂದಿಲ್ಲ.
* ತಲೆಹೊಟ್ಟು ನಿವಾರಣೆಯಲ್ಲಿ ಇದರ ಪಾತ್ರ ಬಹುಮುಖ್ಯವಾದುದಾಗಿದೆ.
* ಸೀಗೆಕಾಯಿಯು ಸಿ ಮತ್ತು ಡಿ ಜೀವಸತ್ವಗಳ ಆಗರವಾಗಿದ್ದು, ಕೂದಲಿಗೆ ಪೋಷಣೆಯನ್ನು ಒದಗಿಸುತ್ತದೆ.
* ಕೂದಲಿಗೆ ಬಣ್ಣ ಹಚ್ಚುವವರು ಅದಕ್ಕೂ ಮುನ್ನ ಕೂದಲನ್ನು ಸೀಗೇಕಾಯಿಯಿಂದ ಚೆನ್ನಾಗಿ ತೊಳೆದುಕೊಂಡು ನಂತರ ಬಣ್ಣ ಲೇಪಿಸಿದಲ್ಲಿ, ದೀರ್ಘಕಾಲ ಉಳಿಯುವುದಲ್ಲದೆ ಸ್ವಾಭಾವಿಕತೆಯನ್ನು ನೀಡುತ್ತದೆ.