ಬೆಳಗಾವಿ ಸುವರ್ಣ ಸೌಧದಲ್ಲಿ ಸೋಮವಾರದಿಂದ ವಿಧಾನ ಮಂಡಲದ ಚಳಿಗಾಲದ ಅಧಿವೇಶನ ಆರಂಭವಾಗಲಿದೆ. ಸರ್ಕಾರದ ಸಾಧನೆಗಳ ಸಮರ್ಥನೆಗೆ ಆಡಳಿತ ಪಕ್ಷ ಸಜ್ಜಾಗಿದೆ. ಸರ್ಕಾರದ ವೈಫಲ್ಯ ಪ್ರಸ್ತಾಪಿಸಿ ತರಾಟೆಗೆ ತೆಗೆದುಕೊಳ್ಳಲು ವಿಪಕ್ಷಗಳು ಕಾರ್ಯತಂತ್ರ ರೂಪಿಸಿವೆ.
ಕುರ್ಚಿ ಕಾದಾಟಕ್ಕೆ ತಾತ್ಕಾಲಿಕ ವಿರಾಮದ ನಡುವೆ ಅಧಿವೇಶನ ಆರಂಭವಾಗಲಿದ್ದು, ಕಬ್ಬು ಬೆಳೆಗಾರರ ಸಮಸ್ಯೆ, ನೀರಾವರಿ ಯೋಜನೆಗಳು, ಅಭಿವೃದ್ಧಿ ಕಾರ್ಯ ಮತ್ತಿತರ ವಿಷಯಗಳು ಚರ್ಚೆಗೆ ಬರಲಿವೆ. ದ್ವೇಷ ಭಾಷಣ ಪ್ರತಿ ಬಂಧಿಸುವ, ಸಾಮಾಜಿಕ ಬಹಿಷ್ಕಾರಕ್ಕೆ ತಡೆಯುಟ್ಟುವ ಹೊಸ ಕಾನೂನುಗಳು ಸೇರಿದಂತೆ 21 ವಿದೇಯಕಗಳ ಮಂಡಿಸಲು ಸರ್ಕಾರ ಸಿದ್ಧತೆ ಮಾಡಿಕೊಂಡಿದೆ.
ನಾಳೆಯಿಂದ ಬೆಳಗಾವಿ ಸುವರ್ಣ ಸೌಧದಲ್ಲಿ ವಿಧಾನ ಮಂಡಲ ಚಳಿಗಾಲದ ಅಧಿವೇಶನ ನಡೆಯಲಿದ್ದು, ಕುಂದಾನಗರಿ ಸಕಲ ರೀತಿಯಲ್ಲಿ ಸಜ್ಜಾಗಿದೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರು, ಶಾಸಕರು, ಅಧಿಕಾರಿಗಳು ಸೇರಿದಂತೆ ಸಿಬ್ಬಂದಿಗೆ ಊಟ ವಸತಿ ವ್ಯವಸ್ಥೆ ಮಾಡಲಾಗಿದೆ.
ಈ ಬಾರಿ ಅಧಿವೇಶನಕ್ಕೆ ಪೊಲೀಸರು ಸೇರಿದಂತೆ 12,000 ಸಿಬ್ಬಂದಿ ಬಳಕೆ ಮಾಡಿಕೊಳ್ಳಲಾಗುವುದು. ಈಗಾಗಲೇ ಮೂರು ಸಾವಿರ ರೂಂಗಳನ್ನು ಜಿಲ್ಲಾಡಳಿತ ಬುಕ್ ಮಾಡಿದೆ. ಸಿಎಂ ಮತ್ತು ಡಿಸಿಎಂಗೆ ಅತಿಥಿ ಗೃಹದಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ.
ಈ ಬಾರಿ ಬೆಳಗಾವಿ ನಗರದಲ್ಲಿ ಹೆಚ್ಚುವರಿ ಭದ್ರತೆ ನಿಯೋಜಿಸಲಾಗಿದೆ. ದೆಹಲಿಯಲ್ಲಿ ಉಗ್ರರಿಂದ ಕಾರ್ ಸ್ಫೋಟ ಪ್ರಕರಣ ಹಿನ್ನೆಲೆಯಲ್ಲಿ ಅಧಿವೇಶನದ ವೇಳೆ ಎಚ್ಚರ ವಹಿಸುವಂತೆ ಕೇಂದ್ರ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಬೆಳಗಾವಿ ನಗರದಲ್ಲಿ ಹೆಚ್ಚುವರಿ ಆಗಿ 6000 ಪೊಲೀಸರನ್ನು ನಿಯೋಜಿಸಲಾಗಿದೆ. ನಗರ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಬಂದೋಬಸ್ತ್ ಕೈಗೊಳ್ಳಲಾಗಿದೆ. 6 ಎಸ್ಪಿ ರ್ಯಾಂಕ್ ಮಟ್ಟದ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.
