ಬೆಂಗಳೂರು: ಶಾಸಕ ಗಾಲಿ ಜನಾರ್ಧನ ರೆಡ್ಡಿ ಪುತ್ರ ಜಿ. ಕಿರೀಟಿ ರೆಡ್ಡಿ ವಿರುದ್ಧ ಭೂ ಕಬಳಿಕೆ ಆರೋಪ ಕೇಳಿ ಬಂದಿದೆ.
ಬಳ್ಳಾರಿ ನಗರದ ಮಧ್ಯಭಾಗದಲ್ಲಿರುವ 100 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ಸ್ಥಿರಾಸ್ತಿ ಕಬಳಿಕೆ ಆರೋಪದಡಿ ಜಿ. ಕಿರೀಟಿ ರೆಡ್ಡಿ ಮತ್ತು ಅವರ ಸಹವರ್ತಿಗಳು ಭಾಗಿಯಾಗಿರುವ ಆರೋಪದ ಮೇಲೆ ಕ್ರಿಮಿನಲ್ ಪ್ರಕರಣದ ತನಿಖೆಯನ್ನು ಒಪ್ಪಿಸುವಂತೆ ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿದ್ದು, ಈ ಸಂಬಂಧ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ವಿವಾದಿತ ಜಾಗದ ಮಾಲೀಕ ಎಂ. ಗೋವರ್ಧನ(74) ಸಲ್ಲಿಸಿದ ತಕರಾರು ಅರ್ಜಿ ಸೋಮವಾರ ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠದ ಮುಂದೆ ವಿಚಾರಣೆಗೆ ಬಂದಿದೆ. ಕೆಲಕಾಲ ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ಪೀಠ, ಪ್ರತಿವಾದಿಗಳಾಗಿರುವ ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ, ಸಿಐಡಿ, ಕೌಲ್ ಬಜಾರ್ ಠಾಣೆ ಇನ್ಸ್ಪೆಕ್ಟರ್, ಧಾರವಾಡ ವಲಯ ಐಜಿಪಿಗೆ ನೋಟಿಸ್ ಜಾರಿಗೊಳಿಸಿ ಡಿಸೆಂಬರ್ 15ಕ್ಕೆ ವಿಚಾರಣೆ ಮುಂದೂಡಿದೆ.
