ರಾವಲ್ಪಿಂಡಿ: ಪಾಕಿಸ್ತಾನದ ರಾವಲ್ಪಿಂಡಿಯ ಅಡಿಯಾಲ ಜೈಲಿನಲ್ಲಿ ಇಮ್ರಾನ್ ಖಾನ್ ಜೀವಂತವಾಗಿದ್ದಾರೆ. ಆದರೆ ತೀವ್ರ ಮಾನಸಿಕ ಹಿಂಸೆಯಿಂದ ಜರ್ಜರಿತರಾಗಿದ್ದು, ಕೋಪಗೊಂಡಿದ್ದಾರೆ ಎಂದು ಅವರ ಸಹೋದರಿ ಡಾ. ಉಜ್ಮಾ ಹೇಳಿದ್ದಾರೆ.
ಅಡಿಯಾಲ ಜೈಲಿನಲ್ಲಿ ಇಮ್ರಾನ್ ಖಾನ್ ಅವರ ಸಾವಿನ ವದಂತಿಗಳಿಂದ ಉಂಟಾದ ತೀವ್ರ ನಾಟಕೀಯ ಬೆಳವಣಿಗೆ ಮತ್ತು ವ್ಯಾಪಕ ಪ್ರತಿಭಟನೆಗಳ ನಂತರ ಪರಿಸ್ಥಿತಿ ಸುಧಾರಿಸಿದೆ ಎಂದು ತೋರುತ್ತದೆ.
ಅವರ ಸಹೋದರಿ ಉಜ್ಮಾಗೆ ಇಮ್ರಾನ್ ಖಾನ್ ಭೇಟಿ ಮಾಡಲು ಅಂತಿಮವಾಗಿ ಅವಕಾಶ ನೀಡಲಾಯಿತು. ಹೊರಬಂದ ನಂತರ ಅವರು ಇಮ್ರಾನ್ ಖಾನ್ ಸ್ಥಿತಿಯನ್ನು ದೃಢಪಡಿಸಿದ್ದಾರೆ.
ಅವರು ಚೆನ್ನಾಗಿದ್ದಾರೆ, ಫಿಟ್ ಆಗಿದ್ದಾರೆ ಮತ್ತು ಜೀವಂತವಾಗಿದ್ದಾರೆ. ಆದರೆ ತುಂಬಾ ಕೋಪಗೊಂಡಿದ್ದಾರೆ. ಅವರನ್ನು ಮಾನಸಿಕ ಹಿಂಸೆಗೆ ಒಳಪಡಿಸುತ್ತಿದ್ದಾರೆ ಮತ್ತು ಯಾರೊಂದಿಗೂ ಸಂವಹನ ನಡೆಸಲು ಅವಕಾಶ ನೀಡುತ್ತಿಲ್ಲ ಎಂದು ಅವರು ಹೇಳಿದರು ಎಂದು ಉಜ್ಮಾ ತಿಳಿಸಿದ್ದಾರೆ.
ರಾವಲ್ಪಿಂಡಿಯ ಅಡಿಯಾಲ ಜೈಲಿನೊಳಗೆ ಪಿಟಿಐ ಮುಖ್ಯಸ್ಥರ ಹತ್ಯೆಯ ವದಂತಿಗಳ ನಡುವೆ ಅವರ ಸ್ಥಿತಿಯನ್ನು ತಿಳಿದುಕೊಳ್ಳಲು ಕೋರಿ ಇಮ್ರಾನ್ ಖಾನ್ ಬೆಂಬಲಿಗರು ಇಂದು ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿದರು.
ಇಸ್ಲಾಮಾಬಾದ್ ಹೈಕೋರ್ಟ್ ಹೊರಗೆ ಪಿಟಿಐ ಸಂಸದರು ಜಮಾಯಿಸಿದರು, ಇಮ್ರಾನ್ ಖಾನ್ ಅವರ ಸಹೋದರಿಯರು ಮತ್ತು ಅವರ ಬೆಂಬಲಿಗರು ಅಡಿಯಾಲ ಜೈಲಿನ ಹೊರಗೆ ಸೇರಿದ್ದರು. ಜೈಲಿನ ಸುತ್ತಲೂ ಭದ್ರತೆಯನ್ನು ಹೆಚ್ಚಿಸಲಾಗಿತ್ತು.
