ಬೆಂಗಳೂರು: ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಪವರ್ ಕಮಿಟಿಯಿಂದ ಬೇರೆ ಬೇರೆ ಜೈಲುಗಳಲ್ಲಿ ಪರಿಶೀಲನೆ ನಡೆಸಲಾಗುವುದು.
ರಾಜ್ಯ ಕಾರಾಗೃಹಗಳ ಸುಧಾರಣೆಗೆ ಸರ್ಕಾರ ರಚಿಸಿರುವ ಸಮಿತಿ ಬೇರೆ ಬೇರೆ ಜೈಲುಗಳಲ್ಲಿ ಪರಿಶೀಲಿಸಲಿದೆ. ದೆಹಲಿಯ ತಿಹಾರ್ ಜೈಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ. ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಹಿತೇಂದ್ರ ನೇತೃತ್ವದ ಉನ್ನತ ಮಟ್ಟದ ಸಮಿತಿ ತಿಹಾರ್ ಜೈಲಿನಲ್ಲಿ ಕೈಗೊಂಡ ಸುಧಾರಣಾತ್ಮಕ ಅಂಶಗಳ ಬಗ್ಗೆ ಅಧ್ಯಯನ ನಡೆಸಲಿದೆ.
ಆಡಳಿತ, ತಾಂತ್ರಿಕವಾಗಿ ತಿಹಾರ್ ಜೈಲು ಆಡಳಿತ ಜಾರಿ ತಂದಿರುವ ಅಂಶ, ಬಂಧಿಗಳಿಗೆ ರೂಪಿಸಿರುವ ಕಾರ್ಯಕ್ರಮಗಳ ಕುರಿತು ಅಧ್ಯಯನ ನಡೆಸಲಿದೆ. ಮಂಗಳೂರು ಮತ್ತು ಕಲಬುರಗಿ ಜೈಲಿಗೆ ಸಹ ತೆರಳಿ ಪರಿಶೀಲನೆ ನಡೆಸಲಿದೆ.
ಎಲ್ಲಾ ಕಾರಾಗೃಹಗಳಿಗೆ ತೆರಳಿ ಅಧ್ಯಯನಕ್ಕೆ ಸಮಿತಿ ಮುಂದಾಗಿದೆ. ವ್ಯವಸ್ಥೆಯಲ್ಲಿರುವ ಲೋಪ ದೋಷ, ಸಿಬ್ಬಂದಿ ಕೊರತೆ, ಜೈಲಿನ ಸಾಮರ್ಥ್ಯಕ್ಕೆ ಅನುಗುಣವಾಗಿ ಬಂಧಿಗಳ ಸಂಖ್ಯೆ, ಆಧುನಿಕ ತಂತ್ರಜ್ಞಾನ ಬಳಸಿ ಕಾರ್ಯನಿರ್ವಹಣೆ ಇನ್ನಿತರ ಅಂಶಗಳ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸಲು ನಿರ್ಧರಿಸಲಾಗಿದೆ, ಇತ್ತೀಚೆಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಕ್ರಮ ನಡೆದಿತ್ತು. ಜೈಲಿನಲ್ಲಿ ಕೈದಿಗಳು ಮೊಬೈಲ್ ಬಳಸುತ್ತಿರುವ ವಿಡಿಯೋ ವೈರಲ್ ಆಗಿತ್ತು.
