ಕೊಪ್ಪಳ: ಹನುಮಮಲಾ ವಿಸರ್ಜನಾ ಕಾರ್ಯಕ್ರಮ ನಿಮಿತ್ತ ಕೊಪ್ಪಳ ಜಿಲ್ಲಾ ಅಥ್ಲೆಟಿಕ್ ಅಸೋಷಿಯೇಷನ್, ಕೈಗಾರಿಕೆಗಳು ಮತ್ತು ಸ್ಥಳೀಯ ಮುಖಂಡರು ಹಾಗೂ ಸಾರ್ವಜನಿಕರ ಸಯಯೋಗದಲ್ಲಿ ಹನುಮಮಾಲಾಧಾರಿಗಳಿಗೆ ವಿವಿಧ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಕೊಪ್ಪಳ ಸಂಸದರಾದ ರಾಜಶೇಖರ ಬಸವರಾಜ ಹಿಟ್ನಾಳ ಹೇಳಿದರು.
ಅವರು ಸೋಮವಾರ ಕೊಪ್ಪಳ ಜಿಲ್ಲಾಡಳಿತ ಭವದಲ್ಲಿರುವ ಲೋಕಸಭಾ ಸದಸ್ಯರ ಕಛೇರಿಯಲ್ಲಿ ಹನುಮಮಲಾ ವಿಸರ್ಜನಾ ಕಾರ್ಯಕ್ರಮ-2025ರ ಹಿನ್ನೆಲೆಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ ಮಾತನಾಡಿದರು.
ಆಂಜನೇಯಸ್ವಾಮಿ ಜನ್ಮಸ್ಥಳ ಅಂಜನಾದ್ರಿಯಲ್ಲಿ ಇದೇ ಡಿಸೆಂಬರ್ 2 ಮತ್ತು 3ರಂದು ನಡೆಯಲಿರುವ ಹನುಮಮಾಲಾ ವಿಸರ್ಜನಾ ಕಾರ್ಯಕ್ರಮಕ್ಕಾಗಿ ಕೊಪ್ಪಳ ಜಿಲ್ಲಾಡಳಿತವು ಈಗಾಗಲೇ ಎಲ್ಲಾ ರೀತಿಯ ವ್ಯವಸ್ಥೆಯನ್ನು ಮಾಡಿದ್ದು, ದೇವಸ್ಥಾನದ ಅಲಂಕಾರ, ಬೆಟ್ಟಕ್ಕೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಬೆಟ್ಟದ ಮೇಲಿನ ದೇವಸ್ಥಾನದಲ್ಲಿ ನಡೆಯವ ವಿಶೇಷ ಪೂಜಾ ಕಾರ್ಯಕ್ರಮದ ನೇರಪ್ರಸಾರವನ್ನು ಎಲ್.ಇ.ಡಿ ಪರದೆ ಮೂಲಕ ಬೆಟ್ಟದ ಕೆಳಗಿರುವ ಭಕ್ತಾಧಿಗಳಿಗೆ ತೋರಿಸುವ ಕೆಲಸ ಮಾಡಲಾಗಿದೆ. ಇದರ ಜೊತೆಗೆ ಕುಡಿಯುವ ನೀರು ಮತ್ತು ಪ್ರಸಾದದ ವ್ಯವಸ್ಥೆ, ಭಕ್ತಾಧಿಗಳಿಗೆ ಸ್ನಾನ ಘಟ್ಟಗಳ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ, ಪಾರ್ಕಿಂಗ್ ಹಾಗೂ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಇದಲ್ಲದೇ ಆರೋಗ್ಯ ಸೇವೆ ಮತ್ತು ಸಹಾಯವಾಣಿ ಕೇಂದ್ರವನ್ನು ಸಹ ಸ್ಥಾಪಿಸಲಾಗಿದ್ದು, ಈ ಎಲ್ಲಾ ವ್ಯವಸ್ಥೆಗಳನ್ನು ಬಹಳ ಅಚ್ಚುಕಟ್ಟಾಗಿ ಮಾಡಲಾಗಿದೆ ಎಂದರು.
ಕಳೆದ ವರ್ಷವೂ ಹನುಮಮಾಲಾ ವಿಸರ್ಜನಾ ಕಾರ್ಯಕ್ರಮವನ್ನು ತುಂಬಾ ಚೆನ್ನಾಗಿ ಮಾಡಲಾಗಿತ್ತು. ಈ ವರ್ಷ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಬರುವ ನಿರೀಕ್ಷೆಯಿರುವುದರಿಂದ ಇನ್ನೂ ಹೆಚ್ಚಿನ ವ್ಯವಸ್ಥೆಗಳನ್ನು ಮಾಡಬೇಕೆಂಬ ಉದ್ದೇಶದಿಂದ ಕೊಪ್ಪಳ ಜಿಲ್ಲಾ ಅಥ್ಲೆಟಿಕ್ ಅಸೋಷಿಯೇಷನ್ ಮತ್ತು ಕೈಗಾರಿಕೆಗಳು ಹಾಗೂ ಸ್ಥಳೀಯರ ಸಯಯೋಗದಲ್ಲಿ ಹನುಮ ಮಾಲಾಧಿರಿಗಳಿಗೆ ವಿವಿಧ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಹಾಗಾಗಿ ಸಂಗಾಪೂರದ ಶ್ರೀ ಕಣಿವೆ ಆಂಜನೇಯ ಸ್ವಾಮಿ ದೇವಸ್ಥಾನ, ಆನೆಗುಂದಿಯ ಶ್ರೀ ದುರ್ಗಾದೇವಿ ಬೆಟ್ಟ, ತಿರುಮಲಾಪುರದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ, ಅಂಜನಾದ್ರಿ ಮುಖ್ಯರಸ್ತೆಯ ಅಗಳಕೇರಾದ ಅಂದಿಗಾಲೇಶ್ವರ ದೇವಸ್ಥಾನ, ಹಿಟ್ನಾಳ ಕ್ರಾಸ್, ಆನೆಗುಂದಿಯ ಶ್ರೀ ಕೃಷ್ಣದೇವರಾಯ ವಿಶ್ರಾಂತಿ ತಾಣ, ಸಣಾಪೂರ ಐ.ಬಿ., ಕಮಲಾಪುರದ ಕಡ್ಡಿರಾಂಪೂರ ಕ್ರಾಸ್ ಹಂಪಿ ರೋಡ್ ಸೇರಿದಂತೆ ಈ ಎಂಟು ಸ್ಥಳಗಳಲ್ಲಿ ಅಗತ್ಯ ಅನುಕೂಲ ಮಾಡಿಕೊಳ್ಳಲಾಗಿದ್ದು, ಪಾದಯಾತ್ರೆ ಮೂಲಕ ಬರುವ ಹನುಮಮಾಲಾಧಾರಿಗಳಿಗೆ ಅಲ್ಲಿ ತಂಗಲು ಪೆಂಡಲ ವ್ಯವಸ್ಥೆ ಜೊತೆಗೆ ಹಾಲು, ಮಜ್ಜಿಗೆ, ಉಪಹಾರ, ಊಟ, ವಿಶ್ರಾಂತಿ, ಶೌಚಾಲಯ ವ್ಯವಸ್ಥೆ, ಸ್ನಾನಗೃಹ ಮತ್ತು ರಾತ್ರಿ ಭಜನೆಗೂ ಅನುಕೂಲಗಳಿವೆ. ಈ ಎಲ್ಲಾ ಸೌಲಭ್ಯಗಳು ಇಂದು ರಾತ್ರಿಯಿಂದ ಡಿಸೆಂಬರ್ 3ರ ಬೆಳಿಗ್ಗೆಯ ಉಪಹಾರದ ವರೆಗೂ ಇರಲಿವೆ ಎಂದು ಹೇಳಿದರು.
ಹನುಮಮಾಲಾ ವಿಸರ್ಜನಾ ಕಾರ್ಯಕ್ರಮದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಿದ್ದು, ಈ ಬಗ್ಗೆ ಜಿಲ್ಲಾಡಳಿತವು ಅಗತ್ಯ ಕ್ರಮ ಕೈಗೊಳ್ಳುತ್ತಿದೆ. ಪ್ಲಾಸ್ಟಿಕ್ ಬಾಟಲ್ ಸೇರಿದಂತೆ ಯಾವುದೇ ರೀತಿಯ ಪ್ಲಾಸ್ಟಿಕ್ ವಸ್ತುಗಳನ್ನು ಅಂಜನಾದ್ರಿ ಬೆಟ್ಟದ ವ್ಯಾಪ್ತಿಯಲ್ಲಿ ಕೊಂಡೊಯ್ಯಲು ಅವಕಾಶವಿಲ್ಲ. ಹಾಗಾಗಿ ಎಲ್ಲರೂ ಪ್ಲಾಸ್ಟಿಕ್ ಬಳಕೆಯನ್ನು ಮಾಡಬಾರದು. ಭಕ್ತಾಧಿಗಳಿಗೆ ಸ್ನಾನಕ್ಕಾಗಿ ಕಡ್ಲೆ ಹಿಟ್ಟಿನ ವ್ಯವಸ್ಥೆಯನ್ನು ಸಹ ಮಾಡಲಾಗಿದ್ದು, ಭಕ್ತಾಧಿಗಳು ಯವುದೇ ರೀತಿಯ ಸಾಬೂನು ಮತ್ತು ಶಾಂಪು ಬಳಸದೇ ಕಡ್ಲೆ ಹಿಟ್ಟಿನ ಬಳಕೆ ಮಾಡಿಬೇಕು. ಹನುಮಮಾಲಾ ವಿಸರ್ಜನೆಗೆ ಭಕ್ತಾಧಿಗಳ ವಸ್ತ್ರಗಳು ಹಾಗೂ ಇತರೆ ಸಾಮಾಗ್ರಿಗಳನ್ನು ಹಾಕಲು ಪ್ರತ್ಯೇಕ ಸ್ಥಳವನ್ನು ಗುರುತಿಸಿದ್ದು, ಭಕ್ತಾಧಿಗಳು ತಮ್ಮ ಬಟ್ಟೆಗಳನ್ನು ನಿಗದಿಪಡಿಸಿದ ಜಾಗದಲ್ಲಿಯೇ ಹಾಕಬೇಕು ಮತ್ತು ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕೆಂದು ಈ ಮೂಲಕ ಮನವಿ ಭಕ್ತಾಧಿಗಳಲ್ಲಿ ಮಾಡಿಕೊಳ್ಳುತ್ತೇನೆಂದರು.
ಪತ್ರಿಕಾಗೋಷ್ಠಿಯಲ್ಲಿ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀನಿವಾಸ ಗುಪ್ತಾ, ಸಂಸದರ ಆಪ್ತ ಸಹಾಯಕ ಅರುಣಕುಮಾರ ಸೇರಿದಂತೆ ವಿವಿಧ ಮಾಧ್ಯಮ ಪ್ರತಿನಿಧಿಗಳು, ವಾರ್ತಾ ಇಲಾಖೆಯ ಸಿಬ್ಬಂದಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
