ನವದೆಹಲಿ: ಅಸ್ಸಾಂ ಪ್ರವಾಹ ಸಂತ್ರಸ್ತರಿಗೆ ಬಾಲಿವುಡ್ ನಟ ಅಕ್ಷಯ್ ಕುಮಾರ್ 1 ಕೋಟಿ ರೂ. ನೀಡಿದ್ದಾರೆ. ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ್ ಸೋನೋವಾಲ್ ಈ ಕುರಿತು ಟ್ವೀಟ್ ಮಾಡಿದ್ದು ಅಕ್ಷಯ್ ಕುಮಾರ್ ಅವರಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ.
ಅಸ್ಸಾಂ ಪ್ರವಾಹ ಪರಿಹಾರಕ್ಕಾಗಿ 1 ಕೋಟಿ ರೂ. ದೇಣಿಗೆ ನೀಡಿದ ಅಕ್ಷಯ್ ಕುಮಾರ್ ಅವರಿಗೆ ಧನ್ಯವಾದಗಳು. ಪ್ರವಾಹ ಬಿಕ್ಕಟ್ಟಿನ ಸಂದರ್ಭದಲ್ಲಿ ನೀವು ಬೆಂಬಲ ತೋರಿಸಿದ್ದೀರಿ. ಅಸ್ಸಾಂನ ಸ್ನೇಹಿತರಾದ ನಿಮಗೆ ದೇವರ ಆಶೀರ್ವಾದವಿರಲಿ ಎಂದು ಹೇಳಿದ್ದಾರೆ.
ಕಳೆದ ತಿಂಗಳು ಅಸ್ಸಾಂನ ಎಲ್ಲ 33 ಜಿಲ್ಲೆಗಳು ಪ್ರವಾಹದಿಂದ ಮುಳುಗಡೆಯಾಗಿದ್ದವು. ಸುಮಾರು 28 ಲಕ್ಷ ಜನ ಸಂತ್ರಸ್ತರಾಗಿದ್ದಾರೆ. ಸಾವಿರಾರು ಮನೆಗಳು ಹಾನಿಗೊಳಗಾಗಿ ಅಪಾರ ಪ್ರಮಾಣದ ಬೆಳೆಗಳು ನಾಶವಾಗಿವೆ. ರಸ್ತೆ, ಸೇತುವೆ ಕೊಚ್ಚಿ ಹೋಗಿವೆ. ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ, ಇತರೆ ಸರ್ಕಾರಿ ಸಂಸ್ಥೆಗಳು ಮತ್ತು ಸ್ವಯಂಸೇವಾ ಸಂಸ್ಥೆಗಳು ಪ್ರವಾಹ ಪರಿಹಾರ ಕಾರ್ಯಾಚರಣೆಯಲ್ಲಿ ನಿರತವಾಗಿವೆ.