ಬೆಳಗಾವಿ: ಬೆಳಗಾವಿಯಲ್ಲಿ ನಡೆಯುತ್ತಿರುವ ವ್ಧಾನಮಂಡಲ ಚಳಿಗಾಲದ ಅಧಿವೇಶನಕ್ಕೆ ಇಂದು ಎರಡನೇ ದಿನ. ಸರ್ಕಾರದ ವಿರುದ್ಧ ಇಂದು ಒಂಭತ್ತು ಸಂಘಟನೆಗಳು ಪ್ರತಿಭಟನೆಗೆ ಮುಂದಾಗಿದೆ. ಇದೇ ವೇಳೆ ವಿಪಕ್ಷ ಬಿಜೆಪಿ ರೈತರೊಂದಿಗೆ ಹೋರಾಟಕ್ಕೆ ಸಜ್ಜಾಗಿದ್ದು, ಸುವರ್ಣ ವಿಧನಸೌಧ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದೆ.
ಬಿಜೆಪಿ ಪ್ರತಿಭಟನೆ ವಿಚಾರವಾಗಿ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಚಳಿಗಾಲದ ಅಧಿವೇಶನ ಆರಂಭವಾಗಿದೆ. ರೈತರಿಗೆ ಮೋಸ ಮಾಡುತ್ತಿರುವುದು ಕೇಂದ್ರ ಸರಕಾರ. ರೈತರ ಸಮಸ್ಯೆಗಳಿಗೆ, ಸಂಕಷ್ಟಗಳಿಗೆ ಕೇಂದ್ರ ಸರ್ಕಾರ ಪರಿಹಾರ ನೀಡುತ್ತಿಲ್ಲ. ಕೇಂದ್ರ ಸರಕಾರ ರೈತರ ಬೆಳೆಗಳನ್ನು ಖರೀದಿ ಮಾಡುತ್ತಿಲ್ಲ. ಖರೀದಿ ಮಾಡಲು ಬಿಜೆಪಿ ನಾಯಕರು ಕೇಂದ್ರ ಸರಕಾರಕ್ಕೆ ಒತ್ತಾಯ ಮಾಡಬೇಕು ಎಂದು ಆಗ್ರಹಿಸಿದರು.
ಕೇಂದ್ರ ಸರಕಾರ ರಾಜ್ಯಕ್ಕೆ ಕೊಡಬೇಕಿರುವ ಬಾಕಿ ಹಣ ಬಿಡುಗಡೆ ಮಾಡಬೇಕು. ರೈತರಿಗೆ ಪರುಹಾರ ನೀಡುವ ನಿಟ್ಟಿನಲ್ಲಿ ಅನುದಾನ ಬಿಡುಗಡೆಗೊಳಿಸಲಿ ಎಂದರು.
ಬಿಜೆಪಿ ಪ್ರತಿಭಟನೆ ವಿಚಾರವಾಗಿ ಮಾತನಾಡಿದ ಡಿಸಿಎಂ, ನಾವು ರೈತರ ಪರವಾಗಿ ಇದ್ದೇವೆ. ಕಬ್ಬು, ಮೆಕ್ಕೆಜೋಳ, ಖರೀದಿ ರಾಜ್ಯ ಸರಕಾರ ಆರಂಭ ಮಾಡಿದೆ. ನಾವು ಇಂತಿಷ್ಟು ಖರೀದಿ ಮಾಡಬೇಕು ಎಂದು ಆದೇಶ ಮಾಡಿದ್ದೇವೆ. ಎಂ ಆರ್ ಪಿ ಬೆಲೆ ಪಿಕ್ಸ್ ಮಾಡೋರುದು ಕೇಂದ್ರ ಸರಕಾರ. ಹೋರಾಟ ಮಾಡಬೇಕಾಗಿದ್ದು ಕೇಂದ್ರ ಸರಕಾರದ ವಿರುದ್ಧ ಎಂದರು.
ರೈತರಿಗೆ ಅನ್ಯಾಯ ಮಾಡುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಬಿಜೆಪಿಯವರು ಹೋರಾಡಲಿ, ನಮ್ಮ ವಿರುದ್ಧ, ರಾಜ್ಯ ಸರ್ಕಾರದ ವಿರುದ್ಧ ಹೋರಾಡುವುದಲ್ಲ ಎಂದು ಗುಡುಗಿದರು.
