ಅರ್ಜಿ ಹಾಕಿದವರ ಪರಿಗಣಿಸದೇ ಆಯಾ ಕ್ಷೇತ್ರದ ಪರಿಣಿತರನ್ನೇ ಗುರುತಿಸಿ ಆಯ್ಕೆ: 70 ಮಂದಿ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿದ ಸಿಎಂ ಸಿದ್ಧರಾಮಯ್ಯ

ಬೆಂಗಳೂರು: ಕರ್ನಾಟಕ ಉದಯವಾಗಿ 70 ವರ್ಷಗಳಾಗಿರುವುದನ್ನು ಪರಿಗಣಿಸಿ 70 ಮಂದಿ ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ರಾಜ್ಯದ ಮುಖ್ಯಮಂತ್ರಿಯಾಗಿ ಯಾರ ಹೆಸರನ್ನೂ ನಾನು ಪ್ರಶಸ್ತಿಗೆ ಶಿಫಾರಸ್ಸು ಮಾಡಿಲ್ಲ. ಆಯ್ಕೆ ಸಮಿತಿ ತೀರ್ಮಾನವೇ ಅಂತಿಮವಾಗಿದ್ದು, ಅವರ ನಿರ್ಧಾರದಂತೆ ಆಯ್ಕೆ ನಡೆದಿದೆ ಎಂದು ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ “೭೦ನೇ ಕರ್ನಾಟಕ ರಾಜ್ಯೋತ್ಸವವನ್ನು ಉದ್ಘಾಟಿಸಿ, ವಿವಿಧ ಕ್ಷೇತ್ರಗಳಲ್ಲಿ ಅನನ್ಯ ಸೇವೆ ಸಲ್ಲಿಸಿದ ನಾಡಿನ 70 ಮಂದಿ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿ ಅವರು ಮಾತನಾಡಿದರು.

ಅರ್ಜಿ ಹಾಕಿದವರನ್ನು ಪರಿಗಣಿಸದೇ ಆಯಾ ಕ್ಷೇತ್ರದ ಪರಿಣಿತರನ್ನೇ ಗುರುತಿಸಿ ಆಯ್ಕೆ ಮಾಡಬೇಕು ಎನ್ನುವುದು ನಮ್ಮ ತೀರ್ಮಾನವಾಗಿತ್ತು. ಪುರಸ್ಕೃತರೆಲ್ಲರೂ ಶತಾಯುಶಿಗಳಾಗಿ ನಿಮ್ಮ ನಿಮ್ಮ ಕ್ಷೇತ್ರಗಳಲ್ಲಿ ಇನ್ನಷ್ಟು ಸಾಧನೆ ಮಾಡಿ, ನಿಮ್ಮ ಬದುಕು ಸಾರ್ಥಕವಾಗಲಿ ಎಂದು ಹಾರೈಸುತ್ತೇನೆ ಎಂದರು.

ಒಂದೇ ವಿಭಾಗದಲ್ಲಿ ಒಬ್ಬರಿಗಿಂತ ಹೆಚ್ಚು ಸಾಧಕರ ಹೆಸರು ಇದ್ದ ಸಂದರ್ಭದಲ್ಲಿ ಮಾತ್ರ ಪ್ರಾದೇಶಿಕ ನ್ಯಾಯ, ಸಾಮಾಜಿಕ ನ್ಯಾಯದ ಕಾರಣಕ್ಕಾಗಿ ಆ ಅರ್ಹರಲ್ಲೇ ಒಬ್ಬರ ಹೆಸರನ್ನು ಅಂತಿಮಗೊಳಿಸಲಾಗಿದೆ. ಮಾಧ್ಯಮಗಳು ಯಾರ ಆಯ್ಕೆ ಬಗ್ಗೆಯೂ ತಕರಾರು ಮಾಡಿಲ್ಲ. ಆದ್ದರಿಂದ ಅರ್ಹರಿಗೇ ಪ್ರಶಸ್ತಿ ಸಿಕ್ಕಿದೆ ಎಂದು ಭಾವಿಸುತ್ತೇನೆ ಎಂದರು.

ಕನ್ನಡ ನಾಡು – ನುಡಿಯ ಬೆಳವಣಿಗೆಗೆ ಈ ಎಲ್ಲಾ ಸಾಧಕರ ಸೇವೆಗೆ ಈ ಮೂಲಕ ಗೌರವ ಸಲ್ಲಿಸಲಾಗಿದೆ. ಪ್ರಶಸ್ತಿ ಪುರಸ್ಕೃತರ ಜೀವನ ಸಾಧನೆ ಇತರರಿಗೆ ಮಾದರಿಯಾಗಲಿ. ಕನ್ನಡ ಭಾಷೆ ನಾಡಿನ ಮನೆ ಮನೆಗಳಲ್ಲಿ ನೆಲೆಸುವಂತಾಗಲಿ ಎಂದು ಹಾರೈಸಿದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಸೇರಿದಂತೆ ಅನೇಕ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read