ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ ದತ್ತಜಯಂತಿ ಬ್ಯಾನರ್ ತೆರವು ವಿಚಾರವಾಗಿ ಗಲಾಟೆ ನಡೆದು ಕಾಂಗ್ರೆಸ್ ಮುಖಂಡ ಗಣೇಶ್ ಎಂಬಾತನನ್ನು ಬರ್ಬರವಾಗಿ ಹತ್ತೆ ಮಾಡಿದ್ದ ಘಟನೆ ನಡೆದಿತ್ತು. ಇದೀಗ ಹತ್ಯೆಯಾದ ಗಣೇಶ್ ಸೇರಿ 8 ಜನರ ವಿರುದ್ಧ ಎಫ್ಐಆರ್ ದಾಖಲಾಗಿರುವ ಘಟನೆ ನಡೆದಿದೆ.
ಗಣೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಜರಂಗದಳದ ಕಾರ್ಯಕರ್ತ ಸಂಜಯ್, ನಾಗಭೂಷಣ್ ಸೇರಿದಂತೆ ಹಲವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ. ಮೂವರು ತಲೆಮರೆಸಿಕೊಂಡಿದ್ದಾರೆ. ಆರೋಪಿಗಳು ಕೊಲೆಯಾದ ಗಣೇಶ್ ವಿರುದ್ಧವೇ ಆರೋಪ ಮಾಡಿದ್ದು, ಈ ಹಿನ್ನೆಲೆಯಲ್ಲಿ ಕೊಲೆಯಾದ ಗಣೇಶ್ ವಿರುದ್ಧ ಕೇಸ್ ದಾಖಲಾಗಿದೆ.
ಡಿಸೆಂಬರ್ 5ರ ರಾತ್ರಿ ಸಖರಾಯಪಟ್ಟಣದ ಮಠದ ಗುತ್ತಿ ರಸ್ತೆಯಲ್ಲಿ ಬಜರಂಗದಳ ಕಾರ್ಯಕರ್ತರು ಹಾಗೂ ಗಣೇಶ್ ನಡುವೆ ಗಲಾಟೆಯಾಗಿತ್ತು. ಬ್ಯಾನರ್, ಫ್ಲೆಕ್ಸ್ ಗಳನು ತೆಗೆಯುವಾಗ ಗಣೇಶ್ ಗಲಾಟೆ ಮಾಡಿದ್ದ. ಈ ವೇಳೆ ಟ್ರ್ಯಾಕ್ಟರ್ ನಲ್ಲಿ ಬಂದ ನಾನು ಗಣೇಶ್ ನನ್ನು ಪ್ರಶ್ನಿಸಿದ್ದೆ. ಅದಕ್ಕೆ ಜಗಳ ತಾರಕಕ್ಕೇರಿತ್ತು ಎಂದು ಆರೋಪಿ ಸಂಜಯ್ ಹೇಳಿದ್ದಾನೆ. ಬಳಿಕ ಗಣೇಶ್ ಸಂದೀಪ್ ಸೇರಿದಂತೆ ೮ಕ್ಕೂ ಹೆಚ್ಚು ಯುವಕರೊಂದಿಗೆ ಬಂದು ಮಚ್ಚಿನಿಂದ ಹಲ್ಲೆ ಮಾಡಿದ್ದ ಎಂದು ನಾಗಭೂಷಣ್ ಹಾಗೂ ಸಂಜಯ್ ಆರೋಪಿಸಿದ್ದಾರೆ.
ಇಬ್ಬರ ದೂರು ಆಧರಿಸಿ ಕೊಲೆಯಾದ ಗಣೇಶ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರಾದ ಸಂದೀಪ್, ಅಪ್ಪು, ಚಂದು, ಅಭಿ, ಬಿಂದು, ರೋಷನ್ ಸೇರಿದಂತೆ 8 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ.
