ನವದೆಹಲಿ: ಆಡಳಿತಾರೂಢ ಕಾಂಗ್ರೆಸ್ ನಾಯಕರ ದೆಹಲಿ ಪ್ರವಾಸದ ಬೆನ್ನಲ್ಲೇ ಇದೀಗ ವಿಪಕ್ಷ ಬಿಜೆಪಿ ನಾಯಕರಿಂದ ದೆಹಲಿ ಪ್ರವಾಸ ಆರಂಭವಾಗಿದೆ. ಬಿಜೆಪಿ ರೆಬಲ್ ನಾಯಕರು ದೆಹಲಿಯಲ್ಲಿ ಬೀಡು ಬಿಟ್ಟಿದ್ದು, ವರಿಷ್ಠ ಭೇಟಿಗೆ ಕಾಯುತ್ತಿದ್ದಾರೆ.
ಶಾಸಕ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಕುಮಾರ್ ಬಂಗಾರಪ್ಪ, ಶ್ರೀಮಂತ ಪಾಟೀಲ್, ಬಿ.ವಿ.ನಾಯ್ಕ್, ಜೆಡಿಎಸ್ ನಾಯಕ ಎನ್.ಆರ್.ಸಂತೋಷ್ ಸೇರಿದಂತೆ ಹಲವರು ದೆಹಲಿಗೆ ಭೇಟಿ ನೀಡಿದ್ದು, ಕರ್ನಾಟಕ ಭವನದಲ್ಲಿ ಬೀಡು ಬಿಟ್ಟಿದ್ದಾರೆ. ಸಂಜೆ ವೇಳೆಗೆ ಇನ್ನಷ್ಟು ರೆಬಲ್ ನಾಯಕರು ದೆಹಲಿಗೆ ತೆರಳಲಿದ್ದಾರೆ ಎಂದು ತಿಳಿದುಬಂದಿದೆ.
ಇಂದು ಸಂಜೆ ಅಥವಾ ನಾಳೆ ಬಿಜೆಪಿ ವರಿಷ್ಠರನ್ನು ಭೇಟಿಯಾಗಲು ರೆಬಲ್ ನಾಯಕರು ಸಮಯ ಕೇಳಿದ್ದಾರೆ. ಬಿ.ವೈ.ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮುಂದುವರೆಸುವ ಬಗ್ಗೆ ಆಕ್ಷೇಪ ಹೊಂದಿರುವ ನಾಯಕರು, ಬದಲಾವಣೆ ಕುರಿತಾಗಿ ತಮ್ಮ ಅಭಿಪ್ರಾಯಗಳನ್ನು ವರಿಷ್ಠರಿಗೆ ತಿಳಿಸಲಿದ್ದಾರೆ ಎನ್ನಲಾಗಿದೆ. ಒಟ್ಟಾರೆ ಬಿಜೆಪಿ ರೆಬಲ್ ನಾಯಕರ ದೆಹಲಿ ಪ್ರವಾಸ ಕುತೂಹಲ ಮೂಡಿಸಿದೆ.
