ಬೆಂಗಳೂರು: ಕೇಂದ್ರ ಹಣಕಾಸು ಸಚಿವಾಲಯವು ಬಹಿರಂಗಪಡಿಸಿರುವ ಅಂಕಿ-ಅಂಶ ಆಘಾತಕಾರಿ ಮಾತ್ರವಲ್ಲ, ಸ್ಪಷ್ಟವಾಗಿ ಜನವಿರೋಧಿಯಾಗಿದೆ ಎಂದು ಸಿಎಂ ಸಿದ್ಧರಾಮಯ್ಯ ತಿಳಿಸಿದ್ದಾರೆ.
ಕೇವಲ ಕಳೆದ ಐದು ವರ್ಷಗಳಲ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳು ₹6,15,647 ಕೋಟಿ ಸಾಲವನ್ನು ವಜಾ (write off) ಮಾಡಿದೆ — ವರ್ಷಕ್ಕೆ ಸರಾಸರಿ ₹1,23,129 ಕೋಟಿ..!! ಒಂದು ವರ್ಷದ ಅವಧಿಯಲ್ಲಿ ವಜಾ ಮಾಡಿರುವ ಬ್ಯಾಂಕ್ ಸಾಲದ ಮೊತ್ತವು ಬಡವರು ಮತ್ತು ಮಧ್ಯಮ ವರ್ಗದ ಕುಟುಂಬಗಳ ಜೀವನ ಮಟ್ಟ ಸುಧಾರಣೆಗಾಗಿ ನೇರವಾಗಿ ಅವರಿಗೆ ನೀಡಲಾಗುತ್ತಿರುವ ಕರ್ನಾಟಕದ ಗ್ಯಾರಂಟಿ ಯೋಜನೆಗಳ ವಾರ್ಷಿಕ ವೆಚ್ಚಕ್ಕಿಂತ ದುಪ್ಪಟ್ಟಾಗಿದೆ ಎಂದು ಹೇಳಿದ್ದಾರೆ.
ನಾವು ಜನಸಾಮಾನ್ಯರ ಪರ ಎಂದು ಬೊಗಳೆ ಬಿಡುವ ಬಿಜೆಪಿ ಸದ್ದಿಲ್ಲದಂತೆ ಶ್ರೀಮಂತ ಉದ್ಯಮಿಗಳ ಸಾಲವನ್ನು ವಜಾ ಮಾಡಿ, ಅವರ ಭ್ರಷ್ಟಾಚಾರ ಮತ್ತು ಜನವಿರೋಧಿ ನೀತಿಗಳನ್ನು ಬೆಂಬಲಿಸುತ್ತಿದೆ. ಇದು ಬೆವರು-ರಕ್ತ ಹರಿಸಿ ಸಂಪಾದಿಸಿದ ಗಳಿಕೆಯಲ್ಲಿ ತೆರಿಗೆ ನೀಡುತ್ತಿರುವ ಭಾರತೀಯರಿಗೆ ಬಗೆಯುತ್ತಿರುವ ದ್ರೋಹವಾಗಿದೆ ಎಂದು ಟೀಕಿಸಿದ್ದಾರೆ.
ವಜಾ ಮಾಡಿದ ಸಾಲದ ಮೊತ್ತದಲ್ಲಿ ಎಷ್ಟು ಪಾಲು ಪ್ರಧಾನಿ ಮೋದಿ ಅವರ ಅತ್ಯಂತ ನಿಕಟ ಸ್ನೇಹಿತರ ಕಂಪನಿಗಳಿಗೆ ಸೇರಿದೆ? ಚುನಾವಣಾ ಬಾಂಡ್ ಮೂಲಕ ಬಿಜೆಪಿಗೆ ಉದಾರವಾಗಿ ದೇಣಿಗೆ ನೀಡಿದವರ ಎಷ್ಟು ಕೋಟಿ ಸಾಲ ವಜಾ ಆಗಿದೆ? 2014–2020ರ ಅವಧಿಯಲ್ಲಿ ವಜಾ ಮಾಡಲಾದ ಸಾಲದ ಮೊತ್ತದಲ್ಲಿ ಎಷ್ಟು ಹಣ ನಿಜವಾಗಿ ವಸೂಲಾಗಿದೆ? ಸನ್ಮಾನ್ಯ ಪ್ರಧಾನಿಗಳೇ ಈ ಪ್ರಶ್ನೆಗಳಿಗೆ ಉತ್ತರಿಸುವಿರಾ ಎಂದು ಪ್ರಶ್ನಿಸಿದ್ದಾರೆ.
ಬಡತನ ನಿರ್ಮೂಲನೆಯ ಕಲ್ಯಾಣ ಯೋಜನೆಗಳನ್ನು ಸದಾಕಾಲ ದೂಷಿಸುತ್ತಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಭ್ರಷ್ಟ ಕಾರ್ಪೊರೇಟ್ ಧಣಿಗಳನ್ನು ಆರ್ಥಿಕ ಸಂಕಷ್ಟದಿಂದ ಪಾರುಮಾಡಲು ಸಾರ್ವಜನಿಕ ಹಣವನ್ನು ಯಾಕೆ ದುರ್ಬಳಕೆ ಮಾಡುತ್ತಿದೆ ಎನ್ನುವ ಪ್ರಶ್ನೆಗೆ ಉತ್ತರ ನೀಡುವುದೇ?
ಇದನ್ನು ದಕ್ಷ ಹಣಕಾಸು ನಿರ್ವಹಣೆ ಎನ್ನಲಾಗದು, ಇದು ಜನಸಾಮಾನ್ಯರ ತೆರಿಗೆ ಹಣವನ್ನು ಭ್ರಷ್ಟ ಉದ್ಯಮಿ ಮಿತ್ರರಿಗೆ ಧಾರೆ ಎರೆದು ತಮ್ಮ ರಾಜಕೀಯ ಹಿತಾಸಕ್ತಿಯನ್ನು ರಕ್ಷಿಸಿಕೊಳ್ಳುವ ”ಹೊಸ ಮೋದಿಎಕಾನಮಿಕ್ಸ್” ಎನ್ನಬಹುದು ಅಷ್ಟೆ ಎಂದು ಸಿಎಂ ತಿಳಿಸಿದ್ದಾರೆ.
ಕೇಂದ್ರ ಹಣಕಾಸು ಸಚಿವಾಲಯವು ಬಹಿರಂಗಪಡಿಸಿರುವ ಅಂಕಿ-ಅಂಶ ಆಘಾತಕಾರಿ ಮಾತ್ರವಲ್ಲ, ಸ್ಪಷ್ಟವಾಗಿ ಜನವಿರೋಧಿಯಾಗಿದೆ.
— Siddaramaiah (@siddaramaiah) December 9, 2025
ಕೇವಲ ಕಳೆದ ಐದು ವರ್ಷಗಳಲ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳು ₹6,15,647 ಕೋಟಿ ಸಾಲವನ್ನು ವಜಾ (write off) ಮಾಡಿದೆ — ವರ್ಷಕ್ಕೆ ಸರಾಸರಿ ₹1,23,129 ಕೋಟಿ..!!
ಒಂದು ವರ್ಷದ ಅವಧಿಯಲ್ಲಿ ವಜಾ ಮಾಡಿರುವ ಬ್ಯಾಂಕ್ ಸಾಲದ… pic.twitter.com/ej2aQqDjSp
