ಬೆಂಗಳೂರು: ಕೆಐಎಡಿಬಿ ಗೆ ನೀಡಿದ ಭೂಮಿಯನ್ನು ಶಾಶ್ವತ ಕೃಷಿ ವಲಯ ಎಂದು ಸರ್ಕಾರ ಘೋಷಿಸಿದೆ. ಜಮೀನು ಮಾರುವುದಾದರೆ ಸರ್ಕಾರಕ್ಕೆ ಮಾರಾಟ ಮಾಡಬೇಕು. ಇಲ್ಲದಿದ್ದರೆ ಯಾರಿಗೂ ಮಾರುವಂತಿಲ್ಲ ಎಂದು ಹೇಳಲಾಗಿದ್ದು, ಈ ಮೂಲಕ ರೈತರನ್ನು ಮಣಿಸಲು ಸರ್ಕಾರ ಹೊಸ ತಂತ್ರ ರೂಪಿಸಿದೆ. ಇದು ರೈತರ ವಿರುದ್ಧ ಸೇಡಿನ ಕ್ರಮ ಎಂದು ರೈತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಹೋರಾಟಗಾರರ ಸಾವಿರ ದಿನಗಳ ಹೋರಾಟದ ನಂತರ ಭೂಮಿ ಮಾರಾಟ ಮಾಡುವ ರೈತರ ಸ್ವಾಯತ್ತತೆಯನ್ನು ಸರ್ಕಾರ ಕಸಿದುಕೊಳ್ಳಲು ಮುಂದಾಗಿದೆ.
ಕೆಐಎಡಿಬಿಗೆ ನೀಡದ ಭೂಮಿಯನ್ನು ಶಾಶ್ವತ ಕೃಷಿ ವಲಯ ಎಂದು ಸರ್ಕಾರ ಘೋಷಿಸಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣದ 13 ಹಳ್ಳಿಗಳ ಸುಮಾರು 1777 ಎಕರೆ ಭೂಮಿಯನ್ನು ಕೆಐಎಡಿಬಿ ಸ್ವಾಧೀನ ಮಾಡಿಕೊಳ್ಳಲು ಮುಂದಾಗಿತ್ತು. ಇದರ ವಿರುದ್ಧ ರೈತರು 1192 ದಿನ ಹೋರಾಟ ನಡೆಸಿದ್ದು, ಇದಕ್ಕೆ ಮಣಿದ ಸರ್ಕಾರ ಭೂಸ್ವಾಧೀನ ಅಧಿಸೂಚನೆ ವಾಪಸ್ ಪಡೆಯುವುದಾಗಿ ಘೋಷಿಸಿತ್ತು. ಸಿಎಂ ಸಿದ್ದರಾಮಯ್ಯನವರೇ ಇದನ್ನು ಪ್ರಕಟಿಸಿದ್ದರು.
ಆದರೆ, ನಂತರ ಸರ್ಕಾರ ಕೆಐಎಡಿಬಿ ಗೆ ನೀಡದ ಭೂಮಿಯನ್ನು ಶಾಶ್ವತ ಕೃಷಿ ವಲಯ ಎಂದು ಘೋಷಣೆ ಮಾಡಿದೆ. ಈ ಜಮೀನನ್ನು ಸರ್ಕಾರಕ್ಕೆ ನೀಡುವುದಾದರೆ ಮೂರು ತಿಂಗಳೊಳಗೆ ನೀಡಬಹುದು. ಇಲ್ಲವಾದಲ್ಲಿ ಈ ಜಮೀನನ್ನು ಯಾರಿಗೂ ಮಾರಾಟ ಮಾಡುವಂತಿಲ್ಲ. ಶಾಶ್ವತ ಕೃಷಿ ವಲಯವಾಗಿ ಮಾರ್ಪಾಡಾಗಲಿದೆ ಎಂದು ಆದೇಶಿಸಲಾಗಿದೆ.
ಇದು ಸೇಡಿನ ಕ್ರಮ ಎಂದು ರೈತರು ಆರೋಪಿಸಿದ್ದು, ಬ್ಲಾಕ್ ಮೇಲ್ ಮಾಡಿ ರೈತರ ಭೂಮಿಯನ್ನು ಕಡಿಮೆ ದರಕ್ಕೆ ಕಸಿಯಲು ಸರ್ಕಾರ ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
