ಬೆಂಗಳೂರು: ಕೌಟುಂಬಿಕ ವ್ಯಾಜ್ಯವಿರುವ ಪತಿ-ಪತ್ನಿಯ ಬಗ್ಗೆ ಯಾರಾದರೂ ಒಬ್ಬರು ಅಪ್ರಾಪ್ತ ಮಗುವಿಗೆ ಪಾಸ್ಪೋರ್ಟ್ ನೀಡುವಂತೆ ಅರ್ಜಿ ಸಲ್ಲಿಸುವಾಗ ಮಗುವಿನ ಸುಪರ್ದಿ ಬಗ್ಗೆ ವಾಸ್ತವ ಅಂಶಗಳನ್ನು ಸರಿಯಾಗಿ ಘೋಷಿಸಬೇಕು ಎಂದು ಹೈಕೋರ್ಟ್ ಆದೇಶಿಸಿದೆ.
ತಮಗೆ ಹೊಸ ಪಾಸ್ಪೋರ್ಟ್ ನೀಡುವಂತೆ ಮತ್ತು ಅಸ್ತಿತ್ವದಲ್ಲಿರುವ ಪಾಸ್ಪೋರ್ಟ್ ನವೀಕರಣಕ್ಕೆ ನಿರ್ದೇಶನ ನೀಡುವಂತೆ ಕೋರಿ ಇಬ್ಬರು ಅಪ್ರಾಪ್ತ ಮಕ್ಕಳು ಸಲ್ಲಿಸಿದ್ದ ಅರ್ಜಿಗಳನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕ ಸದಸ್ಯ ಪೀಠದಿಂದ ಈ ಆದೇಶ ನೀಡಲಾಗಿದೆ.
ಪತಿ-ಪತ್ನಿಯಲ್ಲಿ ಯಾರಾದರೂ ಒಬ್ಬರು ಅಪ್ರಾಪ್ತ ಮಗುವಿಗೆ ಪಾಸ್ಪೋರ್ಟ್ ನೀಡುವಂತೆ ಅರ್ಜಿ ಸಲ್ಲಿಸಿದಾಗ ಮಗುವಿನ ಸುಪರ್ದಿ ಬಗ್ಗೆ ಸುಳ್ಳು ಘೋಷಣೆ ಮಾಡಿದರೆ ಅದನ್ನು ಮಾನ್ಯ ಮಾಡಲಾಗುವುದಿಲ್ಲ. ಹೀಗಾಗಿ ಪೋಷಕರು ಪಾಸ್ಪೋರ್ಟ್ ನಲ್ಲಿ ವಾಸ್ತವ ಅಂಶಗಳನ್ನು ಸರಿಯಾಗಿ ಘೋಷಿಸಬೇಕು. ಒಂದು ವೇಳೆ ಡೈವೋರ್ಸ್ ಆಗಿದ್ದರೆ ಮಗುವಿನ ಸುಪರ್ದಿಯ ಬಗ್ಗೆ ಆದೇಶಗಳು ಇದ್ದರೆ ಆ ದಾಖಲೆಗಳನ್ನು ಪಾಸ್ಪೋರ್ಟ್ ವಿತರಣೆ ನವೀಕರಣಕ್ಕೆ ಕೋರಿದ ಅರ್ಜಿಯೊಂದಿಗೆ ಲಗತ್ತಿಸಬೇಕು ಎಂದು ಆದೇಶಿಸಲಾಗಿದೆ.
