ಬೆಳಗಾವಿ: ರಾಜ್ಯದಲ್ಲಿ ಎಟಿಎಂ ದರೋಡೆ ಪ್ರಕರಣ ಮುಂದುವರೆದಿದೆ. ಬೆಳಗಾವಿಯಲ್ಲಿ ದರೋಡೆಕೋರರ ಗ್ಯಾಂಗ್ ವೊಂದು ಎಟಿಎಂಗೆ ಕನ್ನ ಹಾಕಿದ್ದು, ಸೆನ್ಸಾರ್ ಶಬ್ಧ ಬರದಂತೆ ಬ್ಲ್ಯಾಕ್ ಸ್ಪ್ರೇ ಮಾಡಿ ಎಟಿಎಂ ಯಂತ್ರವನ್ನೇ ತಳ್ಳುಗಡಿಯಾಲ್ಲಿ ಹೊತ್ತೊಯ್ದಿರುವ ಘಟನೆ ನಡೆದಿದೆ.
ಬೆಳಗಾವಿ ತಾಲೂಕಿನ ಹೊಸ ವಂಟಮೂರಿ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ 48ಕ್ಕೆ ಹೊಂದಿಕೊಂಡಿರುವ ಇಂಡಿಯಾ ಎಂಟಿಎಂನಲ್ಲಿ ಈ ಘಟನೆ ನಡೆದಿದೆ. ಎಟಿಎಂಗೆ ಬಂದ ಮೂವರು ಖದೀಮರು ಬರುವಾಗ ತಳ್ಳುಗಾಡಿಯೊಂದನ್ನು ತಂದಿದ್ದರು. ಎಟಿಎಂಗೆ ನುಗ್ಗಿದ ಗ್ಯಾಂಗ್ ಮೊದಲು ಸೆನ್ಸಾರ್ ಶಬ್ಧ ಬರದಂತೆ ಬ್ಲ್ಯಾಕ್ ಸ್ಪ್ರೇ ಸಿಂಪಡಿಸಿದ್ದಾರೆ. ಬಳಿಕ ಎಟಿಎಂ ಮಷಿನ್ ಹೊರ ತೆಗೆದು ತಳ್ಳು ಗಾಡಿಯಲ್ಲಿಟ್ಟುಕೊಂಡು ಹೋಗಿದ್ದಾರೆ.
ಹೋಗೆ 200 ಮೀಟರ್ ತಳ್ಳಿಕೊಂಡು ಹೋಗಿ ತಮ್ಮ ವಾಹನದಲ್ಲಿ ಎಟಿಎಂ ಯಂತ್ರ ಇಟ್ಟುಕೊಂಡು ಪರಾರಿಯಾಗಿದ್ದಾರೆ. ಎಟಿಎಂನಲ್ಲಿ ಒಂದು ಲಕ್ಷಕ್ಕೂ ಅಧಿಕ ಹಣವಿತ್ತು ಎಂದು ತಿಳಿದುಬಂದಿದೆ. ಕಾಕತಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಳ್ಳರ ಬಂಧನಕ್ಕೆ ಬಲೆ ಬೀಸಿದ್ದಾರೆ.
