ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಅವರ ಬೆನ್ನು ನೋವಿಗೆ ಸಂಬಂಧಿಸಿದಂತೆ ಸಿ.ವಿ. ರಾಮನ್ ಆಸ್ಪತ್ರೆ ವೈದ್ಯರ ತಂಡ ಜೈಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದು, ಜೈಲಿನಲ್ಲಿ ದರ್ಶನ್ ಗೆ ಚಿಕಿತ್ಸೆ ನೀಡಿದರೆ ಸಾಕು ಎಂದು ತಿಳಿಸಿದೆ.
ನ್ಯಾಯಾಲಯದ ವಿಚಾರಣೆ ವೇಳೆ ತಮಗೆ ತೀವ್ರ ಬೆನ್ನು ನೋವಿದ್ದು, ನಿಲ್ಲಲು, ಕೂರಲು ಸಾಧ್ಯವಾಗುತ್ತಿಲ್ಲ ಎಂದು ದರ್ಶನ್ ಹೇಳಿಕೊಂಡಿದ್ದ ಹಿನ್ನೆಲೆಯಲ್ಲಿ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡುವಂತೆ ಜೈಲು ಅಧಿಕಾರಿಗಳಿಗೆ ಕೋರ್ಟ್ ನಿರ್ದೇಶನ ನೀಡಿತ್ತು.
ಕೋರ್ಟ್ ಆದೇಶದಂತೆ ನಾಲ್ವರು ವೈದ್ಯರ ತಂಡ ದರ್ಶನ್ ಗೆ ಫಿಸಿಯೋಥೆರಪಿ ಚಿಕಿತ್ಸೆ ನೀಡಲು ಆರಂಭಿಸಿದ್ದು, ವಾರಕ್ಕೆ ಎರಡು ಮೂರು ಬಾರಿ ಫಿಸಿಯೋಥೆರಪಿ ನೀಡಲು ವೈದ್ಯರ ತಂಡ ಜೈಲಿಗೆ ಭೇಟಿ ನೀಡುತ್ತಿದ್ದರು. ಚಿಕಿತ್ಸೆಯ ಮೊದಲ ವಾರದಲ್ಲಿ ದರ್ಶನ್ ಅವರ ಬೆನ್ನು ನೋವಿನ ನೆಪ ಬಯಲಾಗಿದೆ ಎಂದು ಹೇಳಲಾಗಿದೆ.
ದರ್ಶನ್ ಅವರಲ್ಲಿ ಬೆನ್ನು ನೋವಿನ ಯಾವುದೇ ಲಕ್ಷಣಗಳಿಲ್ಲ ಎಂದು ಖಚಿತಪಡಿಸಿಕೊಂಡ ವೈದ್ಯರು ಚಿಕಿತ್ಸೆ ನಿಲ್ಲಿಸಿದ್ದಾರೆ. ಅವರಿಗೆ ಫಿಜಿಯೋಥೆರಪಿಯ ಅವಶ್ಯಕತೆ ಇಲ್ಲವೆಂದು ವೈದ್ಯರ ತಂಡ ಜೈಲು ಅಧಿಕಾರಿಗಳಿಗೆ ವರದಿ ಸಲ್ಲಿಸಿದೆ ಎನ್ನಲಾಗಿದೆ.
