ಬೆಂಗಳೂರು: ಮಾಜಿ ಸಚಿವ ಜನಾರ್ಧನ ರೆಡ್ಡಿ ಹೊಸ ಪಕ್ಷ ಸ್ಥಾಪನೆಗೆ ಬಿಜೆಪಿಯಲ್ಲಿಯೇ ಭಿನ್ನಾಭಿಪ್ರಾಯ ಶುರುವಾಗಿದೆ. ಸಚಿವ ಸುಧಾಕರ್ ಜನಾರ್ಧನರೆಡ್ಡಿ ತಮ್ಮ ನಿಲುವು ಬದಲಿಸಿಕೊಳ್ಳಲಿ, ಹೊಸ ಪಕ್ಷ ಸ್ಥಾಪನೆ ಸರಿಯಲ್ಲ ಎಂದು ಹೇಳಿದರೆ, ಇತ್ತ ಕಂದಾಯ ಸಚಿವ ಆರ್ ಅಶೋಕ್, ರೆಡ್ಡಿ ಬಿಜೆಪಿಯಲ್ಲಿಯೇ ಇರಲಿಲ್ಲ. ಅವರ ಜೊತೆ ಸಂಪುಟದಲ್ಲಿ ಕೆಲಸ ಮಾಡಿದ್ದವರಿಂದ ಅವಹೇಳನ ಮಾಡಲಾಗಿತ್ತು ಎಂದು ಗುಡುಗಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಆರ್.ಅಶೋಕ್, ಜನಾರ್ಧನ ರೆಡ್ಡಿ ಬಿಜೆಪಿಯಲ್ಲಿ ಇರಲಿಲ್ಲ. ಅವರ ಮೇಲೆ ಕೇಸ್ ಆದ್ಮೇಲೆ ಬಿಜೆಪಿಯಲ್ಲಿ ಪಾರ್ಟಿಸಿಪೇಟ್ ಆಗಿಲ್ಲ. ದೊಡ್ಡ ಸ್ಕ್ಯಾಮ್ ಆದ್ಮೇಲೆ ಪಾರ್ಟಿಯಿಂದ ತೆಗೆದಿದ್ದಾರೆ ಎಂದು ತಿಳಿಸಿದ್ದಾರೆ.
ಜನಾರ್ಧನ ರೆಡ್ಡಿ ಹೊಸ ಪಾರ್ಟಿ ವಿಚಾರ ಅದು ಅವರ ಸ್ವಂತ ಇಚ್ಛೆ. ಅದ್ರಿಂದ ನಮಗೇನೂ ಸಮಸ್ಯೆ ಇಲ್ಲ. ಬಿಜೆಪಿಯವರು ಕೈಕೊಟ್ಟರು ಎಂದು ಹೇಳಲು ಯಾರು ಕೈಕೊಟ್ರು ಅವರಿಗೆ? ಅಮಿತ್ ಶಾ ಕೈಕೊಟ್ರಾ, ಮೋದಿಯವರು ಕೈಕೊಟ್ರಾ? ಯಡಿಯೂರಪ್ಪ ಕೈಕೊಟ್ರಾ? ಈ ಹಿಂದೆ ಮಂತ್ರಿಯಾಗಿದ್ದರಲ್ಲ ಬಿಜೆಪಿಯಿಂದ? ಆ ಸಂದರ್ಭದಲ್ಲಿ ಅವರಿಗೆ ಸಹಾಯ ಮಾಡಿದ್ದಾರೆ. ಇಡೀ ಕಾಂಗ್ರೆಸ್, ಜೆಡಿಎಸ್ ಅವರ ಮೈಮೇಲೆ ಬಿದ್ದಿದ್ರು. ಆಗ ಸಪೋರ್ಟ್ ಮಾಡಿದವರು ಬಿಜೆಪಿ ನಾಯಕರು ಎಂದು ಗರಂ ಆದರು.