ಬೆಂಗಳೂರು: ರೌಡಿಶೀಟರ್ ಫೈಟರ್ ರವಿ ಬಿಜೆಪಿ ಸೇರ್ಪಡೆ ವಿಚಾರವಾಗಿ ಮಾತನಾಡಿದ ಆರೋಗ್ಯ ಸಚಿವ ಡಾ.ಸುಧಾಕರ್, ಫೈಟರ್ ರವಿ ನನಗೆ ಗೊತ್ತಿಲ್ಲ. ಆದರೆ ಕ್ರಿಮಿನಲ್ ಹಿನ್ನೆಲೆ ಉಳ್ಳವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲ್ಲ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ನಮ್ಮ ಪಕ್ಷಕ್ಕೆ ಒಂದು ತತ್ವ, ಸಿದ್ಧಾಂತ ಇದೆ. ಆನ್ ಲೈನ್ ನಲ್ಲಿಯೂ ಸದಸ್ಯತ್ವ ನೋಂದಣಿ ಮಾಡಿಕೊಳ್ಳಬಹುದು. ಆದರೆ ಕ್ರಿಮಿನಲ್ ಹಿನ್ನೆಲೆಯುಳ್ಳವರನ್ನು ನಾವು ಪಕ್ಷಕ್ಕೆ ಸೇರಿಸಿಕೊಳ್ಳಲ್ಲ. ಅವರ ಪೂರ್ವಾಪರ ಏನು? ಅವರು ಯಾರು ಎಂಬುದನ್ನು ಪರಿಶೀಲಿಸಲಾಗುತ್ತದೆ ಎಂದು ಹೇಳಿದರು.
ಇದೇ ವೇಳೆ ರೌಡಿಶೀಟರ್ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರು ಭಾಗಿ ವಿಚಾರವಾಗಿ ಮಾತನಾಡಿದ ಸಚಿವರು, ನಾನು ಯಾರ ಜೊತೆಗೂ ವೇದಿಕೆ ಹಂಚಿಕೊಂಡಿಲ್ಲ. ರಕ್ತದಾನ ಪವಿತ್ರ ಕಾರ್ಯ ಹಾಗಾಗಿ ಕಾರ್ಯಕ್ರಮಕ್ಕೆ ಹೋಗಿದ್ದೆ. ಅಲ್ಲಿ ಯಾರು ಬಂದಿದ್ದರು, ಯಾರು ಬಂದಿಲ್ಲ ಎಂಬುದೂ ನನಗೆ ಗೊತ್ತಿಲ್ಲ. ಸಹಜವಾಗಿ ಕೆಲವರು ನಮ್ಮ ಜೊತೆ ಫೋಟೋ ತೆಗೆಸಿಕೊಳ್ಳುತ್ತಾರೆ. ಆಗ ಅವರು ಯಾರು? ಯಾವ ಹಿನ್ನೆಲೆಯವರು? ಎಂದು ನೋಡಲು ಆಗುತ್ತಾ ಎಂದು ಪ್ರಶ್ನಿಸಿದರು.