ಬೆಳಗಾವಿ: ಹಿಂದೂ ಪದ ಅಶ್ಲೀಲ ಎಂದು ಅವಹೇಳನಕಾರಿ ಹೇಳಿಕೆ ನೀಡಿರುವ ಶಾಸಕ ಸತೀಶ್ ಜಾರಕಿಹೊಳಿ ತಮ್ಮ ಹೇಳಿಕೆಯನ್ನು ಮತ್ತೆ ಸಮರ್ಥಿಸಿಕೊಂಡಿದ್ದು, ನನ್ನ ಹೇಳಿಕೆಗೆ ನಾನು ಈಗಲೂ ಬದ್ಧನಾಗಿದ್ದೇನೆ. ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸತೀಶ್ ಜಾರಕಿಹೊಳಿ, ಯಾವುದೇ ವಿವಾದ ಸೃಷ್ಟಿಸಲು ನಾನು ಹೇಳಿಕೆ ನೀಡಿಲ್ಲ. ಹಿಂದೂ ಪದದ ಬಗ್ಗೆ ಚರ್ಚೆಯಾಗಲಿ ಎಂಬ ಉದ್ದೇಶಕ್ಕೆ ಹೇಳಿದ್ದೇನೆ. ಅಷ್ಟಕ್ಕೂ ನಾನು ಹಿಂದೂ ಪದ ಅಶ್ಲೀಲ ಎಂದಿದ್ದೇನೆ ಹೊರತು ಹಿಂದೂ ಧರ್ಮ ಅಶ್ಲೀಲ ಎಂದು ಹೇಳಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.
ಕ್ಷಮೆ ಕೇಳಲು ಯಾವ ಕಾರಣಕ್ಕೆ ಕ್ಷಮೆ ಕೇಳಬೇಕು? ವಿಕಿಪೀಡಿಯಾದಲ್ಲಿ ಇದ್ದುದನ್ನು ನಾನು ಹೇಳಿದ್ದೇನೆ. ಪರ್ಷಿಯನ್ ಭಾಷೆಯಲ್ಲಿ ಹಿಂದೂ ಎಂದರೆ ಕೆಟ್ಟ ಅರ್ಥವಿದೆ ಎಂದು ಹೇಳಿದ್ದೇನೆ. ಹಿಂದೂ ಧರ್ಮದ ಬಗ್ಗೆ ಹೇಳಿಲ್ಲ. ನನ್ನ ಹೇಳಿಕೆಗೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ನಾನು ಪಕ್ಷದ ವೇದಿಕೆಯಲ್ಲಿ ಈ ವಿಚಾರ ಮಾತನಾಡಿಲ್ಲ. ಬೇರೊಂದು ವೇದಿಕೆಯಲ್ಲಿ ಮಾತನಾಡಿದ್ದೇನೆ. ನಾನು ಹೇಳಿದ ಹೇಳಿಕೆಗೆ ಈಗಲೂ ಬದ್ಧನಾಗಿದ್ದೇನೆ. ಸಿಎಂ ಅವರಿಗೆ ಈ ಬಗ್ಗೆ ಪತ್ರ ಬರೆದಿದ್ದೇನೆ. ಅವರೇ ಒಂದು ಸಮಿತಿ ರಚನೆ ಮಾಡಿ ನನ್ನ ಹೇಳಿಕೆ ಬಗ್ಗೆ ಪರಿಶೀಲನೆ ನಡೆಸಲಿ ಎಂದು ಹೇಳಿದರು.