ಹಾಸನ: ಬೆಳಕಿನ ಹಬ್ಬ ದೀಪಾವಳಿ ಸಂಭ್ರಮದ ನಡುವೆ ಹಾಸನಾಂಬೆ ದರ್ಶನಕ್ಕೆ ಜನಸಾಗರವೇ ಹರಿದು ಬರುತ್ತಿದ್ದು, ದೇವಾಲಯದ ಆವರಣದಲ್ಲಿ ನೂಕು ನುಗ್ಗಲು ಉಂಟಾಗಿದೆ.
ಸಚಿವರು, ಶಾಸಕರು, ಜನಪ್ರತಿನಿಧಿಗಳು, ಸೆಲೆಬ್ರಿಟಿಗಳು ಹೆಚ್ಚಿನ ಸಂಖ್ಯೆಯಲ್ಲಿ ದೇವರ ದರ್ಶನಕ್ಕೆ ಆಗಮಿಸಿದ್ದು, ಇದರಿಂದಾಗಿ ಸಾಮಾನ್ಯ ಭಕ್ತರು ಸರತಿ ಸಾಲಿನಲ್ಲಿ ನಿಂತು ನಿಂತು ಹೈರಾಣಾಗಿದ್ದಾರೆ. ಇನ್ನೊಂದೆಡೆ ಶಾಸಕ ಪ್ರೀತಂ ಗೌಡ ದೇವಾಲಯದ ಗರ್ಭಗುಡಿ ಬಾಗಿಲಿನಲ್ಲಿಯೇ ನಿಂತಿದ್ದು, ಕೆಲವರಿಗೆ ಮಾತ್ರ ಅವಕಾಶಗಳನ್ನು ಕೊಡುತ್ತಿದ್ದು, ಕೆಲವರಿಗೆ ದೇವಾಲಯಕ್ಕೆ ನೋ ಎಂಟ್ರಿ ಎನ್ನುತ್ತಿದ್ದಾರೆ. ವಿಐಪಿ ದರ್ಬಾರ್ ಕಂಡು ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಾರಿ ಹಾಸನಾಂಬೆ ದೇವಾಲಯ 15 ದಿನಗಳ ಕಾಲ ತೆರೆದಿರಲಿದ್ದು, 12 ದಿನಗಳ ಕಾಲ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಹಾಸನಾಂಬೆ ಕಣ್ತುಂಬಿಕೊಳ್ಳಲು ಇನ್ನು 5 ದಿನಗಳು ಮಾತ್ರ ಅವಕಾಶವಿದ್ದು, ದೂರದೂರುಗಳಿಂದ ಬರುತ್ತಿರುವ ಭಕ್ತರಿಗೆ ಶಾಸಕರ ನಡೆಯಿಂದ ಸಮಸ್ಯೆಯಾಗುತ್ತಿದೆ ಎಂದು ಭಕ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.