ರೋಮ್: ಸ್ಯಾಕ್ಸೋಫೋನ್ ವಾದಕನೊಬ್ಬ ತನ್ನ ಮೆದುಳಿನ ಶಸ್ತ್ರಚಿಕಿತ್ಸೆ ನಡೆಯುತ್ತಿರುವಾಗಲೇ ಸತತ 9 ಗಂಟೆಗಳವರೆಗೆ ಸ್ಯಾಕ್ಸೋಫೋನ್ ವಾದನ ನುಡಿಸುತ್ತಲೇ ಇದ್ದ ಕುತೂಹಲದ ಘಟನೆ ಇಟಲಿಯ ರೋಮ್ನಲ್ಲಿ ನಡೆದಿದೆ.
35 ವರ್ಷದ ಜೀಝ್ ಎಂಬ ಸಂಗೀತಗಾರನಿಗೆ ರೋಮ್ನ ಪೈಡಿಯಾ ಇಂಟರ್ನ್ಯಾಷನಲ್ ಆಸ್ಪತ್ರೆಯಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಮೆದುಳಿನಲ್ಲಿದ್ದ ಗಡ್ಡೆಯನ್ನು ಆತ ಎಚ್ಚರವಾಗಿದ್ದಾಗಲೇ ಯಶಸ್ವಿಯಾಗಿ ತೆಗೆದುಹಾಕಲಾಗಿದೆ. ಹತ್ತು ವೈದ್ಯರ ತಂಡ ನಿರಂತರ ಒಂಬತ್ತು ಗಂಟೆಗಳ ಶಸ್ತ್ರ ಚಿಕಿತ್ಸೆ ನಡೆಸಿದ್ದು ಜೀಝ್ ಅವರು ಆರೋಗ್ಯವಾಗಿದ್ದಾರೆ ಎಂದು ಶಸ್ತ್ರ ಚಿಕಿತ್ಸೆಯ ಮೇಲ್ವಿಚಾರಣೆ ವಹಿಸಿಕೊಂಡಿದ್ದ ಡಾ. ಬ್ರೋ ಗ್ನಾ ತಿಳಿಸಿದ್ದಾರೆ.
‘ಸಂಗೀತ ನುಡಿಸುವಾಗಲೇ ಶಸ್ತ್ರಚಿಕಿತ್ಸೆ ಮಾಡಿದರೆ ಅದು ರೋಗಿಯ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದನ್ನು ಈ ಶಸ್ತ್ರಚಿಕಿತ್ಸೆಯಿಂದ ಗ್ರಹಿಸಲು ನಮಗೆ ಸಾಧ್ಯವಾಯಿತು. ಎಚ್ಚರವಾಗಿದ್ದಾಗಲೇ ಶಸ್ತ್ರಚಿಕಿತ್ಸೆ ಮಾಡಿದರೆ ಮೆದುಳಿನ ಭಾಗಕ್ಕೆ ಯಾವುದೇ ಹಾನಿಯಾಗದಂತೆ ಶಸ್ತ್ರಚಿಕಿತ್ಸೆ ಮಾಡಲು ಶಸ್ತ್ರಚಿಕಿತ್ಸಕರಿಗೆ ಅವಕಾಶ ಮಾಡಿಕೊಡುತ್ತದೆ’ ಎಂದಿದ್ದಾರೆ ವೈದ್ಯರು.
ಈ ಕುರಿತು ಮಾತನಾಡಿರುವ ಡಾ. ಬ್ರೋ ಗ್ನಾ, ‘ಪ್ರತಿಯೊಬ್ಬ ವ್ಯಕ್ತಿ ವಿಭಿನ್ನ ರೀತಿಯಲ್ಲಿ ಇರುವಂತೆ ಪ್ರತಿಯೊಬ್ಬರ ಮೆದುಳೂ ಒಂದೊಂದು ರೀತಿಯಲ್ಲಿ ವಿಶಿಷ್ಟವಾಗಿದೆ ಹಾಗೂ ವಿಭಿನ್ನವಾಗಿದೆ. ಯಾವ ವ್ಯಕ್ತಿಯ ಮೆದುಳು ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ಹೇಗೆಲ್ಲಾ ಸಹಕರಿಸುತ್ತದೆ ಎಂಬುದನ್ನು ಇದರಿಂದ ಸಂಶೋಧಿಸಲು ನಮಗೆ ಸಹಕಾರಿಯಾಯಿತು’ ಎಂದಿದ್ದಾರೆ. ಅಲ್ಲದೇ ಈ ಶಸ್ತ್ರ ಚಿಕಿತ್ಸೆ ವೇಳೆ ರೋಗಿ ಎಚ್ಚರದಿಂದಲೇ ಇರಬೇಕಾಗುತ್ತದೆ ಎನ್ನಲಾಗಿದೆ.